ಹುಣಸೂರು: ಹುಣಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. (ಟಿಎಪಿಸಿಎಂಎಸ್)ವತಿಯಿಂದ ಸಂಘದ ಅಕ್ಕಿಗಿರಣಿ ಕಟ್ಟಡದ ಮುಂಭಾಗ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ಹಾಗೂ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆ.26ರಂದು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವಲಿಂಗಯ್ಯ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 11ಗಂಟೆಗೆ ನಡೆಯುವ ಸಮಾರಂಭದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಅವರು ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಸಂಘದ ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರುಗಳಾದ ಎ.ಸಿ.ಕೆಂಪೇಗೌಡ, ಬಿ.ನಾಗರಾಜು, ಜಿ.ಎನ್.ವೆಂಕಟೇಶ್, ಎಚ್.ಟಿ.ಬಾಬು, ರಮೇಶ್, ಎಚ್.ಎನ್.ಚಂದ್ರಶೇಖರ್,ಎಚ್.ಪ್ರೇಮಕುಮಾರ್, ಎಚ್.ಆರ್.ಸುಜಾತ, ಇಂದುಕಲಾ, ಮಂಗಳಗೌರಿ, ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಉಪ ನಿಬಂಧಕರಾದ ಅನಸೂಯ, ಸಂಘದ ಪ್ರಭಾರ ಕಾರ್ಯದರ್ಶಿ ಎ.ಎಸ್.ಹೇಮಲತಾ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟಿಎಪಿಸಿಎಂಎಸ್ ನಡೆದು ಬಂದ ಹಾದಿ: ಸ್ವಾತಂತ್ರ್ಯಾ ನಂತರದ ಎರಡು ವರ್ಷಗಳ ಬಳಿಕ (13.01.1949) ಸಂಘವನ್ನು ನೋಂದಾಯಿಸಿ, ಹುಣಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಚಟುವಟಿಕೆ ಆರಂಭಿಸಲಾಯಿತಾದರೂ 1958ರಿಂದ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಬಿ.ಎಲ್.ಮರೀಗೌಡ ಅವರು ಪ್ರಪ್ರಥಮ ಅಧ್ಯಕ್ಷರಾಗಿ ಸುದೀರ್ಘ ಹತ್ತು ವರ್ಷಗಳ ಕಾಲ ಆಡಳಿತ ನಡೆಸುವ ಮೂಲಕ ಸಂಘದ ಚಟುವಟಿಕೆ ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂದಿನಿಂದ ಈವರೆಗೆ 26 ಮಂದಿ ಅಧ್ಯಕ್ಷರುಗಳು ಸೇವೆ ಸಲ್ಲಿಸಿದ್ದು, 2024ರ ಫೆಬ್ರವರಿ 6 ರಿಂದ ತಾಲ್ಲೂಕಿನ ಹಿರಿಯ ದಲಿತ ಮುಖಂಡರಾದ ಜಾ.ದಳದ ಬಸವಲಿಂಗಯ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಸಕರಾದ ಇಬ್ಬರು ಅಧ್ಯಕ್ಷರು: ಸಹಕಾರ ಸಂಘ ರಾಜಕೀಯ ಬೆಳವಣಿಗೆಗೆ ಅಡಿಪಾಯ ಎಂಬ ಮಾತಿನಂತೆಯೇ ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದ ಡಿ.ಕರಿಯಪ್ಪಗೌಡ ಮತ್ತು ವಿ.ಪಾಪಣ್ಣ ಅವರು ನಂತರದ ದಿನಗಳಲ್ಲಿ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾರ್ಯ ಚಟುವಟಿಕೆ ವಿಸ್ತರಣೆ:1887 ಸದಸ್ಯರುಗಳನ್ನು ಹೊಂದಿರುವ ಟಿಎಪಿಸಿಎಂಎಸ್ 21,75,975 ರೂ. ಷೇರು ಬಂಡವಾಳ ಹೊಂದಿದೆ. 2024ರ ಮಾರ್ಚ್ 31ಕ್ಕೆ ಸರ್ಕಾರಕ್ಕೆ ಯಾವುದೇ ಸಾಲ ಬಾಕಿ ಹಾಗೂ ಸರ್ಕಾರದ ಸಾಲಗಳ ಮೇಲಿನ ಬಡ್ಡಿ ಬಾಕಿಯನ್ನು ಹೊಂದಿಲ್ಲ.ಸಂಘದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 87,58,002 ರೂ. ವ್ಯಾಪಾರ ವಹಿವಾಟು ನಡೆಸಿ, 16,63,878 ರೂ. ಲಾಭ ಗಳಿಸಿದ್ದು, ಸಂಘವು ತನ್ನ ವ್ಯಾಪಾರ ವಹಿವಾಟು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.
1972ರ ನವೆಂಬರ್ 19ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಪೌರಾಡಳಿತ ಸಚಿವರಾಗಿದ್ದ ಬಿ.ಬಸವಲಿಂಗಯ್ಯಅವರು ಪಟ್ಟಣದ ಸಂತೆಮಾಳದ ಮುಂಭಾಗ ನಿರ್ಮಿಸಿದ್ದ ಟಿಎಪಿಸಿಎಂಎಸ್ ನ ಗೋದಾಮು ಮಳಿಗೆಗಳನ್ನು ಉದ್ಘಾಟಿಸಿದ್ದರು.
50 ವರ್ಷಗಳ ಈ ಮಳಿಗೆಗಳು ಶಿಥಿಲಾವಸ್ಥೆ ತಲುಪಿದ್ದರಿಂದ ಆ ಮಳಿಗೆಗಳನ್ನು ತೆರವುಗೊಳಿಸಿ ಬ್ಲಾಕ್ 1ರಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ 9 ಮಳಿಗೆಗಳನ್ನು ನಿರ್ಮಿಸಲಾಗಿದೆ. ಬ್ಲಾಕ್ 2ರಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಇ-ಸ್ಟ್ಯಾಂಪಿಂಗ್ ವಹಿವಾಟು: ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿಯಿರುವ ಸಂಘದ ಕಟ್ಟಡದ ವಾಣಿಜ್ಯ ಮಳಿಗೆಯಲ್ಲಿ ಇತ್ತೀಚೆಗೆ –ಸ್ಟ್ಯಾಂಪಿಂಗ್ ಮತ್ತು ಶಾಲು,ಹಾರ,ಪೇಟ ಇವುಗಳ ಮಾರಾಟ ಕೇಂದ್ರವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಬಸವಲಿಂಗಯ್ಯ ಕೋರಿದ್ದಾರೆ.