ಗುಂಡ್ಲುಪೇಟೆ: ಚಾಲಕನ ಅಜಾರೂಕತೆಯಿಂದ ಟಾಟಾ ಏಸ್ ವಾಹನ ಪಲ್ಟಿಯಾಗಿ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿವಪುರ ಸಮೀಪದ ಹುಂಡಿಮನೆ ಬಳಿ ಸೋಮವಾರ ನಡೆದಿದೆ.
ತಾಲೂಕಿನ ಕೊಡಹಳ್ಳಿ ಗ್ರಾಮದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಮಹೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಟಾಟಾ ಏಸ್ ನಲ್ಲಿ ಪ್ರಯಾಣಿಕರು ಬರುತ್ತಿದ್ದ ವೇಳೆ ವಾಹನ ಪಲ್ಪಿಯಾಗಿದ್ದು, ಅಂಕಹಳ್ಳಿ ಗ್ರಾಮದ ನಿರ್ಮಲಾ, ಬೆಳ್ಳಯ್ಯ, ಬೇಬಿ, ಮಧನ್, ಗಂಗಮ್ಮ, ಪವಿತ್ರಾ, ಸೋಮಣ್ಣ ಮತ್ತು ಮಕ್ಕಳು ಸೇರಿದಂತೆ 20ಕ್ಕೂ ಅಧಿಕ ಮಂದಿಯ ತಲೆ, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದೆ.

ವಾಹನದಲ್ಲಿ 30 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಾಹಿತಿ ಅರಿತ 112 ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಗಾಯಾಳುಗಳ ಕುಟುಂಬಸ್ಥರು ಧಾವಿಸಿ ಧುಕ್ಕಿಸುತ್ತಿದ್ದು ಕಂಡು ಬಂತು. ಇನ್ನೂ ಘಟನೆಯು ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.