ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಜೋರಾಗಿದ್ದು, ತಮ್ಮ ಮಗನಿಗೆ ಲೋಕಸಭಾ ಟಿಕೆಟ್ ನೀಡುವಂತೆ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ತಮ್ಮ ಪುತ್ರನ ಪರ ಬ್ಯಾಟಿಂಗ್ ಮಾಡಿದ್ದಾರೆ. ತಮ್ಮ ಮಗ ಸಂಜಯ್ ಗೆ ತುಮಕೂರು ಲೋಕಸಭಾ ಟಿಕೆಟ್ ಕೊಡಲಿ ಎಂದು ಟಿ.ಬಿ ಜಯಚಂದ್ರ ಆಗ್ರಹಿಸಿದ್ದು, ತುಮಕೂರು ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕು.
ರಾಜಕೀಯ ಹಿನ್ನಲೆಯುಳ್ಳ ಹೊಸ ಮುಖಕ್ಕೆ ಅವಕಾಶ ಸಿಗಲಿ ಈ ನೆಲೆಯಲ್ಲಿ ನನ್ನ ಮಗ ಸಂಜಯ್ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಸ್ವಯಂ ಪ್ರೇರಿತವಾಗಿ ತಾನು ಅಭ್ಯರ್ಥಿ ಆಗಬೇಕು ಎಂಬ ಅಭಿಲಾಷೆ ಹೊರಹಾಕಿದ್ದಾನೆ.ಆತ ಟಿಕೆಟ್ ಕೇಳಲು ಕೂಡ ಒಂದು ಕಾರಣ ಇದೆ. ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕಾದರೆ ಟಿಕೆಟ್ ಕೊಡಬೇಕು.ನಮ್ಮ ಸಮುದಾಯದಲ್ಲಿ ಮದ್ದಣ್ಣ, ಮಲ್ಲಣ್ಣನವರು ಸಂಸದರಾಗಿದ್ದರು. ಅವರ ನಂತರ ಯಾರೂ ಆಗಿರಲಿಲ್ಲ. ಇನ್ನಾದರೂ ನಮ್ಮ ಸಮುದಾಯಕ್ಕೆ ಅವಕಾಶ ಕೊಡಲಿ ಅನ್ನೋದು ನನ್ನ ಒತ್ತಾಯ ಎಂದು ಹೇಳಿದರು.
ರಾಹುಲ್ ಗಾಂಧಿ ತುಮಕೂರಿನಿಂದ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ. ಇಂದಿರಾಗಾಂಧಿ, ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದಾರೆ. ಕರ್ನಾಟಕದಿಂದ ಸ್ಪರ್ಧೆ ಮಾಡಿ ಹೋದವರಿಗೆ ಪ್ರಧಾನಿಯಾಗುವ ಅವಕಾಶ ಇದೆ.
ಆ ಕಾರಣದಿಂದ ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತೇನೆ. ವಿ.ಸೋಮಣ್ಣ, ಮಾಜಿ ಸಂಸದ ಮುದ್ದಹನುಮೇಗೌಡ ಇರೋದು ಬಿಜೆಪಿಯಲ್ಲಿ ಅವರನ್ನು ಕರೆದು ಟಿಕೆಟ್ ಕೊಡುವಷ್ಟು ಅನಿವಾರ್ಯತೆ ಕಾಂಗ್ರೆಸ್ ಗೆ ಬಂದಿಲ್ಲ ಅವರನ್ನು ಆಮದು ಮಾಡುವಷ್ಟು ಬರಗಾಲವೂ ಕಾಂಗ್ರೆಸ್ ಗೆ ಬಂದಿಲ್ಲ ಎಂದು ಹೇಳಿದರು.
ಸಚಿವರುಗಳಿಗೆ ಲೋಕಸಭೆಗೆ ಸ್ಪರ್ಧೆ ಮಾಡುವ ಕುರಿತು ಮಾತನಾಡಿ ಹೈಕಮಾಂಡ್ ಸೂಚನೇ ನೀಡಿಲ್ಲ.ನಾಳೆ ಸುರ್ಜೇವಾಲರೊಂದಿಗೆ ಸಭೆ ಇದೆ. ಈ ಸಭೆಯಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದು ಟಿ.ಬಿ ಜಯಚಂದ್ರ ಅವರು ತುಮಕೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದಾರೆ.