ಪಾಂಡವಪುರ : ವರಮಹಾಲಕ್ಷ್ಮಿ ಹಬ್ಬದ ದಿನದಂದು ತನ್ನ ಗಂಡನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ನೀಲ್‌ಗಿರೀಸ್ ಶಾಲೆಯ ಶಿಕ್ಷಕಿ ವೈ.ಎನ್.ಅನಿತಾ ಸೋಮವಾರ ಮದ್ಯಾಹ್ನ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಿಧನರಾದರು.
ಆಗಸ್ಟ್ ೧೬ ರಂದು ಬೆಳಗ್ಗೆ ಸುಮಾರು ೭ ಗಂಟೆಗೆ ಶಿಕ್ಷಕಿ ಅನಿತಾ ಪಾಂಡವಪುರ ಟೌನ್ ಶಾಂತಿನಗರ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯಲ್ಲಿ ತಲ್ಲೀನರಾಗಿದ್ದ ವೇಳೆ ಆಕೆಯ ಗಂಡ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಟರಾಜು ಕೆ., ಎಂಬಾತ ಹಿಂಬದಿಯಿಂದ ಸುತ್ತಿಗೆ ಮೂಲಕ ತಲೆಗೆ ಹತ್ತಾರು ಸಲ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು.
ಈ ವೇಳೆ ಅನಿತಾ ಅವರ ಇಬ್ಬರು ಮಕ್ಕಳು ಮನೆಯಿಂದ ಹೊರಗಿದ್ದರು. ಮನೆಯಲ್ಲಿ ತಾಯಿ ಕಿರುಚಾಡಿದ್ದನ್ನು ಕೇಳಿಸಿಕೊಂಡು ಮಕ್ಕಳು ಮನೆಯೊಳಗೆ ಓಡಿ ಬಂದಾಗ ನಟರಾಜ್ ಪತ್ನಿ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಬಂದು ಬೈಕಿನಲ್ಲಿ ಹೊರಟು ಹೋದನು. ತಾಯಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದನ್ನು ಕಂಡು ಮಕ್ಕಳು ಗಾಭರಿಯಾಗಿ ತಮ್ಮ ಮಾವನಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣ ಅನಿತಾ ಸಹೋದರ ಅಭಿಲಾಷ್ ಮನೆಗೆ ಬಂದು ಅನಿತಾ ಅವರನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ನಾರಾಯಣ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಶನಿವಾರ ಅಲ್ಲಿಂದ ಡಿಸ್‌ಚಾರ್ಜ್ ಮಾಡಿಸಿ ಕೆಆರ್ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದ ಕಾರಣ ಅನಿತಾ ಅವರ ಮೆದುಳು ನಿಷ್ಕ್ರಿಯವಾಗಿತ್ತಾದರೂ ಆಕೆಯ ಉಸಿರಾಟ ನಿಂತಿರಲಿಲ್ಲ. ನಿನ್ನೆ ಆಕೆ ಸಾವನ್ನಪ್ಪಿದರು.
ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಿಕ್ಷಕ ನಟರಾಜ್‌ನನ್ನು ಪಾಂಡವಪುರ ಪೊಲೀಸರು ಚಿನಕುರಳಿ ಬಳಿ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಇಂದು ಅನಿತಾ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಟರಾಜ್ ಮತ್ತು ಅನಿತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ನಟರಾಜ್‌ಗೆ ಅನೈತಿಕ ಸಂಬಂಧ ಇತ್ತು. ಈ ಕಾರಣದಿಂದ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಆಗಾಗ್ಗೆ ಜಗಳ ನಡೆಯುತ್ತಿತ್ತು. ಗಂಡನ ದುರ್ನಡೆತೆ ಬಗ್ಗೆ ಪ್ರಶ್ನಿಸುತ್ತಿದ್ದ ಅನಿತಾ ಮೇಲೆ ನಟರಾಜ್ ಹೊಂಚು ಹಾಕಿ ಹಲ್ಲೆ ನಡೆಸಿದ್ದನು ಎನ್ನಲಾಗಿದೆ.