Friday, April 11, 2025
Google search engine

Homeಸ್ಥಳೀಯಎಲ್ಲಾ ಕ್ಷೇತ್ರಗಳ ನಿರ್ಮಾಣಕ್ಕೂ ಶಿಕ್ಷಕರೇ ಕಾರಣ : ಸಾಹಿತಿ ಬನ್ನೂರು ರಾಜು 

ಎಲ್ಲಾ ಕ್ಷೇತ್ರಗಳ ನಿರ್ಮಾಣಕ್ಕೂ ಶಿಕ್ಷಕರೇ ಕಾರಣ : ಸಾಹಿತಿ ಬನ್ನೂರು ರಾಜು 

ಮೈಸೂರು:ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬೇರಾರಿಗೂ ಸಿಗದ ಮಹತ್ವದ ಸ್ಥಾನ-ಮಾನ, ಘನತೆ-ಗೌರವ ಶಿಕ್ಷಕರಿಗೆ ಅರ್ಥಾತ್ ಗುರುಗಳಿಗೆ ದೊರೆತಿದ್ದು ಗುರುದೇವರೆಂಬ ಪೂಜನೀಯ ದೈವೀಕ ಸ್ಥಾನಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಪ್ರತಿಯೊಬ್ಬ ಶಿಕ್ಷಕರೂ ತಮ್ಮ ಆತ್ಮ ಸಾಕ್ಷಿಗನುಗುಣವಾಗಿ  ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಅಕ್ಷರಶಃ ಅವರು  ದೇವರಿಗಿಂತಲೂ ಮಿಗಿಲಾಗುತ್ತಾರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು. 

  ನಗರದ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೃಷ್ಣಮೂರ್ತಿ ಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಇಂದು ಶನಿವಾರ ಏರ್ಪಡಿಸಿದ್ದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥ ಶಿಕ್ಷಕರ ದಿನಾಚಣೆ ಮತ್ತು  ಸಾಧಕ ಶಿಕ್ಷಕರಿಗೆ  ‘ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ’ ಹಾಗೂ ಮಹಾತ್ಮ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವೆಂಬುದು ಜ್ಞಾನಾಮೃತವಾಗಿದ್ದು  ಇಂತಹ ಅಮೃತವನ್ನು ವಿದ್ಯಾರ್ಥಿಗಳಿಗೆ ನಿರ್ವಂಚನೆಯಿಂದ ಧಾರೆಯೆರೆಯುವ  ಶಿಕ್ಷಕರೆಂಬ ಗುರುದೇವರ ಬಗ್ಗೆ  ವಿದ್ಯಾರ್ಥಿಗಳಿಗೆ ಗುರುಭಕ್ತಿ ಇದ್ದು ಶಿಕ್ಷಕರು ಹೇಳಿದಂತೆ ಶ್ರದ್ಧೆ , ಭಕ್ತಿ , ಪ್ರೀತಿ, ಪರಿಶ್ರಮ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಆತ್ಮವಿಶ್ವಾಸ, ದೃಢತೆ, ಏಕಾಗ್ರತೆ, ಆಸಕ್ತಿಯಿಂದ ವಿದ್ಯೆ ಕಲಿತು ಸಾಧನೆಯತ್ತ ಸಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ತಾಯಿ ಶಾರದೆ ಒಲಿಯುತ್ತಾಳೆಂದರು. 

 ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾದದ್ದು. ಹಾಗಾಗಿ ಇದು ರಾಜಕೀಯ ಮತ್ತು ರಾಜಕಾರಣದಿಂದ ಹೊರತಾಗಿರಬೇಕು. ಸರ್ಕಾರಗಳು ಬದಲಾದಂತೆ ಶಾಲಾ-ಕಾಲೇಜುಗಳ ಪಠ್ಯ ವಿಷಯಗಳು, ಪಠ್ಯ ಕ್ರಮಗಳು ಬದಲು ಮಾಡುವುದು ಸರಿಯಲ್ಲ. ಸರಿಯಾದ ಪ್ರಜ್ಞಾವಂತ ಶಿಕ್ಷಣ ತಜ್ಞರಿಂದ ರೂಪಿಸಿ ಒಮ್ಮೆ ಅಳವಡಿಸಲ್ಪಟ್ಟ ಪಠ್ಯಕ್ರಮಗಳು ಕನಿಷ್ಟ ಹತ್ತು ವರ್ಷಗಳಾದರೂ ಇರಬೇಕು. ಇಲ್ಲದಿದ್ದರೆ ಪಾಠ ಬೋಧಿಸುವ ಶಿಕ್ಷಕರಲ್ಲಿ ಹಾಗೂ ಕಲಿಯುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿ ಕಲಿಕೆಯ ಸಾಮರ್ಥ್ಯ ಮತ್ತು ಪ್ರಗತಿ ಕುಂಠಿತಗೊಳ್ಳುತ್ತದೆ. ದೇಶದ ಭವಿಷ್ಯವನ್ನು ಬರೆಯುವ ಶಿಕ್ಷಣ ಕ್ಷೇತ್ರ ಯಾವತ್ತೂ ಪರಿಶುದ್ಧವಾಗಿರಬೇಕು. ಹಾಗೆಯೇ ರಾಷ್ಟ್ರವನ್ನು ಕಟ್ಟುವಲ್ಲಿ ಮಹತ್ತ್ವದ ಪಾತ್ರವಹಿಸುವ ಶಿಕ್ಷಕರ ಭವಿಷ್ಯದ ಬಗ್ಗೆಯೂ ಸರ್ಕಾರಗಳು ಕಾಳಜಿವಹಿಸ ಬೇಕೆಂದ ಬನ್ನೂರು ರಾಜು ಅವರು ಯಾವ ದೇಶ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿರುತ್ತದೋ ಅದು ಬಲಿಷ್ಟವಾಗಿರುತ್ತದೆಂದು ಹೇಳಿದರು.

 ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರಾದ  ಬಾಗಳಿ ಮಹೇಶ್, ಸಿ .ಎಲ್. ಶರ್ಮಿಳಾ, ಎಂ.ಜಿ.ಸುಗುಣಾವತಿ, ಎಸ್.ಸಿ. ವೇದರತ್ನ, ತಸ್ಮೀನಾ ಬಾನು, ಅವರಿಗೆ  “ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಹಾಗೆಯೇ ಶಿಕ್ಷಕ ಜಯಪ್ಪ ಹೊನ್ನಾಳಿ ಮತ್ತು ಶಿಕ್ಷಕಿ ಸುಗಂಧಮ್ಮ ಜಯಪ್ಪ ಅವರಿಗೆ ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಂಸ್ಕೃತಿ ಚಿಂತಕ ಡಾ. ಕೆ. ರಘುರಾಮ್ ವಾಜಪೇಯಿ ಅವರು ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾರಂಭದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸುತ್ತೂರಿನ ಜೆಎಸ್ಎಸ್ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನಂದಾಭೂಪಾಳಿ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೇಖಕಿ ಡಾ.ಲೀಲಾ ಪ್ರಕಾಶ್, ನಗರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಶಿಕ್ಷಕ ಮಾಲಂಗಿ ಸುರೇಶ್, ಮುಂತಾದವರು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular