ಗುಂಡ್ಲುಪೇಟೆ: ಶಿಕ್ಷಣ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ತಿದ್ದಿ, ತೀಡುವ ಜೊತೆಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಕರು ಬಹುತೇಕ ಎಲ್ಲರ ಬದುಕಿಗೂ ಬೆಳಕಾಗುತ್ತಾರೆ ಎಂದು ಸಹಕಾರ ಬ್ಯಾಂಕ್(ಬೆಂಗಳೂರು) ವ್ಯವಸ್ಥಾಪಕ ನಿರ್ದೇಶಕರಾದ ಗುರುಸ್ವಾಮಿ ತಿಳಿಸಿದರು.
ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರ ಪ್ರೌಢಶಾಲೆಯಲ್ಲಿ ನಡೆದ ಗುರುಗಳ ಸಮ್ಮಿಲನ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ.ರಾಜಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ವಕಾಲಕ್ಕೂ ಶ್ರೇಷ್ಠ ವೃತ್ತಿಯಾಗುವ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲರೂ ಪುಣ್ಯವಂತರು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಕೆ.ಸಿ.ರಾಜಪ್ಪ ಕಷ್ಟದಿಂದ ಬಂದವರು. ತಮ್ಮಂತೆ ಕಲಿಸಿದ ಮಕ್ಕಳು ಆಗಬೇಕು ಎಂದು ನಿರಂತರವಾಗಿ ವಿದ್ಯಾರ್ಥಿಗಳ ಅಭ್ಯುಧಯಕ್ಕೆ ತೊಡಗಿಸಿಕೊಂಡರು. ಇದೇ ಕಾರಣಕ್ಕೆ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಅರ್ಥಪೂರ್ಣ ಕಾರ್ಯಕ್ರಮ ಮಾಡುವ ಮೂಲಕ ಈಗ ನಿವೃತ್ತರಾದ ಮತ್ತು ಈ ಹಿಂದೆ ನಿವೃತ್ತರಾಗಿರುವ ಶಾಲೆಯ ಎಲ್ಲಾ ಶಿಕ್ಷಕರ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಮೂಲಕ ಕೃತಜ್ಞತೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಅವರಿಗೆ ಶಿಕ್ಷಣ ನೀಡಿದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಸ್ಥಾನದಲ್ಲಿ ನೋಡಬೇಕು ಎಂದು ಶಿಕ್ಷಕರು ಶ್ರಮಿಸುತ್ತಿರುವುದು ಮೆಚ್ಚುವ ವಿಷಯ. ಇಂತಹ ಪ್ರಾಮಾಣಿಕ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.
ಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಮುಖ್ಯ ಶಿಕ್ಷಕ ಹರೀಶ್‍ಕುಮಾರ್, ನಿವೃತ್ತ ಮುಖ್ಯ ಶಿಕ್ಷಕರಾದ ಭೋಗಣ್ಣ, ರಾಜೇಂದ್ರ, ಸಹ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳು ಹಾಜರಿದ್ದರು.