ಮಂಗಳೂರು (ದಕ್ಷಿಣ ಕನ್ನಡ) : ಪಂಜಾಬ್ ನಲ್ಲಿ ಅಸಹಜವಾಗಿ ಸಾವನ್ನಪ್ಪಿದ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷಾ ಎಸ್. ನಾಯರ್(22) ಅಂತ್ಯ ಸಂಸ್ಕಾರವು ಧರ್ಮಸ್ಥಳದ ಬೊಳಿಯಾರಿನಲ್ಲಿರುವ ಕುಟುಂಬದ ಮನೆಯಲ್ಲಿಂದು ನಡೆಯಿತು.
ಬೆಳಗ್ಗೆ ಮೃತದೇಹ ಮನೆಗೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ರಾತ್ರಿಯ ವೇಳೆ ಬೆಂಗಳೂರಿಗೆ ವಿಮಾನದ ಮೂಲಕ ತರಲಾಗಿದ್ದ ಮೃತದೇಹವನ್ನು ಅಲ್ಲಿಂದ ಧರ್ಮಸ್ಥಳಕ್ಕೆ ಆ್ಯಂಬುಲೆನ್ಸ್ ನಲ್ಲಿ ತರಲಾಯಿತು.
ಶಾಸಕ ಹರೀಶ್ ಪೂಂಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಸಿಪಿಎಂ ಕಾರ್ಯದರ್ಶಿ ಬಿ.ಎಂ.ಭಟ್, ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರು ಗಣ್ಯರು ಆಗಮಿಸಿ ಅಂತಿಮದರ್ಶನ ಪಡೆದರು.
ಆಕಾಂಕ್ಷಾರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೃತರ ತಂದೆತಾಯಿ, ಕುಟುಂಬಸ್ಥರು ಹಾಗೂ ಆಕೆಯ ಸ್ನೇಹಿತರೆಲ್ಲ ಹೇಳುವ ಪ್ರಕಾರ ಆಕಾಂಕ್ಷಾ ಆ ರೀತಿ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆದ್ದರಿಂದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾನು, ನಮ್ಮ ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಅಲ್ಲಿನ ಎಸ್ಪಿ, ಡಿ.ಜಿ.ಯವರಿಗೆ ಕರೆಮಾಡಿ ಮಾತನಾಡಿದ್ದೇವೆ. ಆ ಬಳಿಕವೇ ಅಲ್ಲಿ ಎಫ್.ಐ.ಆರ್. ಆಗಿ ಪ್ರೊಫೆಸರ್ ಮೇಲೆ ಕ್ರಮ ಆಗಿದೆ ಎಂದು ತಿಳಿಸಿದರು