ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಮಾರತಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು FIR ನಲ್ಲಿ ದಾಖಲಾಗಿರುವ ಟೆಕ್ಕಿ ಪತ್ನಿ ಹಾಗೂ ಆಕೆಯ ಸಂಬಂಧಿಕರಿಗೆ ಸದ್ಯದಲ್ಲೇ ನೋಟಿಸ್ ಕೊಡಲಿದ್ದಾರೆ.
ಮುನ್ನೆಕೊಳ್ಳಾಲದ ಮಂಜುನಾಥ್ ಲೇಔಟ್ನ ಡೆಲ್ಫೀನಿಯಂ ಅಪಾರ್ಟ್ಮೆಂಟ್ನ 3ನೇ ಮಹಡಿಯ ಫ್ಲಾಟ್ನಲ್ಲಿ ನೆಲೆಸಿದ್ದ ಉತ್ತರಪ್ರದೇಶ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಅತುಲ್ ಸುಭಾಷ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಸಹೋದರ ಬಿಕಾಸ್ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಸುಭಾಷ್ ಅತುಲ್ ಅವರ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ಸಹೋದರ ಅನುರಾಗ್ ಹಾಗೂ ಚಿಕ್ಕಪ್ಪ ಸುಶೀಲ್ ಹೆಸರನ್ನು ನಮೂದಿಸಿದ್ದಾರೆ. ಈ ನಾಲ್ಕು ಮಂದಿ ಸೇರಿಕೊಂಡು ನನ್ನ ಅಣ್ಣ ಸುಭಾಷ್ ಅವರಿಗೆ ವಿನಾಕಾರಣ ಕಿರುಕುಳ ನೀಡಿ ಉತ್ತರಪ್ರದೇಶದಲ್ಲಿ ದೂರುಗಳನ್ನು ನೀಡಿದ್ದಾರೆ. ಅಲ್ಲದೆ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇವರು ನೀಡಿದ ದೂರಿನನ್ವಯ ಮಾರತಹಳ್ಳಿ ಠಾಣೆ ಪೊಲೀಸರು ಭಾರತೀಯ ನ್ಯಾಯಸಂಹಿತೆ ಕಾಯ್ದೆ 108(ಆತಹತ್ಯೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದೂರಿನ ಸಾರಾಂಶ:
ಅತುಲ್ ಅವರು 2019ರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ನಿಕಿತಾಳನ್ನು ಮದುವೆಯಾಗಿದ್ದು, ದಂಪತಿಗೆ 4 ವರ್ಷದ ಗಂಡು ಮಗುವಿದೆ. ನಿಖಿತಾ ಅವರು ತನ್ನ ತಾಯಿ ಸಹೋದರನ ಕುಮಕ್ಕಿನಿಂದ ಅತುಲ್ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದ್ದಳು ಎಂದು ಆರೋಪಿಸಲಾಗಿದೆ.
ಇವರು ಪುತ್ರನ ಭೇಟಿಗೂ ಅವಕಾಶ ನೀಡದೆ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಈ ಹಣವನ್ನು ಕೊಡದಿದ್ದರೆ ನೀನು ಬದುಕಿರಬೇಡ ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಹೋದರ ಬಿಕಾಸ್ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟೆಕ್ಕಿ ಸುಭಾಷ್ ಅತುಲ್ ಅವರು ಆತ್ಮಹತ್ಯೆಗೂ ಮುನ್ನ ಬರೆದಿರುವ 44 ಪುಟಗಳ ಪೈಕಿ 4 ಪುಟವನ್ನು ಕೈಯಲ್ಲಿ ಬರೆದಿದ್ದರೆ ಉಳಿದ ಪುಟಗಳಲ್ಲಿ ಟೈಪ್ ಮಾಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಡೆತ್ನೋಟ್ನಲ್ಲಿರುವ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ ಟೆಕ್ಕಿ ತಂಗಿದ್ದ ಅವರ ಫ್ಲಾಟ್ನ್ನು ಶೋಧ ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಮಗನಿಗೆ ಗಿಫ್ಟ್ ಬಾಕ್ಸ್ :
ಆತ್ಮಹತ್ಯೆಗೂ ಮುನ್ನ ತನ್ನ 4 ವರ್ಷದ ಮಗನಿಗಾಗಿ ಗಿಫ್ಟ್ ಬಾಕ್ಸ್ ನ್ನು ಮನೆಯಲ್ಲಿ ತಂದಿಟ್ಟಿದ್ದು ಅದನ್ನು ಮಗನಿಗೆ ತಲುಪಿಸುವಂತೆ ಡೆತ್ನೋಟ್ನಲ್ಲಿ ಟೆಕ್ಕಿ ಉಲ್ಲೇಖಿಸಿದ್ದಾರೆ. ಅಲ್ಲದೆ ನ್ಯಾಯ ಬಾಕಿ ಇದೆ ಎಂಬ ಬರಹ ಇರುವ ಪೋಸ್ಟರ್ ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ ನಂತರ ಆತ್ಮಹತ್ಯೆಗೆ ಶರಣಾಗಿರುವುದು ವಿಷಾದಕರ.ಪತ್ನಿ ಹಾಗೂ ಆಕೆಯ ಸಂಬಂಧಿಕರ ಕಿರುಕುಳ ಹಾಗೂ ಸುಳ್ಳು ಕೇಸ್ಗಳಿಂದಾಗಿ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದರ ಬಗ್ಗೆಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವುದು ಕಂಡುಬಂದಿದೆ.
ಮೂರು ದಿನಗಳಿಂದ ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದ ಟೆಕ್ಕಿ ಕಚೇರಿ ನೀಡಿದ್ದ ಕೆಲಸಗಳನ್ನು ಪೂರೈಸಿದ್ದಾರೆ. ಅಲ್ಲದೆ ತನ್ನ ಕುಟುಂಬಸ್ಥರಿಗೆ ಸಲ್ಲಬೇಕಾದ ದಾಖಲೆಗಳು ಹಾಗೂ ಇನ್ನಿತರ ದಾಖಲೆಗಳನ್ನು ಪಾಕ್ ಮಾಡಿ ಬ್ಯಾಗ್ನಲ್ಲಿಟ್ಟಿದ್ದಾರೆ. ಈ ಡೆತ್ನೋಟ್ನ್ನು ಸುಪ್ರೀಂಕೋರ್ಟ್, ಹೈಕೋರ್ಟ್, ಕಚೇರಿ, ಸರ್ಕಾರೇತರ ಎಸ್ಐಎಫ್ಐ ಸಂಸ್ಥೆ, ಕುಟುಂಬಸ್ಥರಿಗೆ ಇಮೇಲ್ ಕಳುಹಿಸಿ ಸೋಮವಾರ ಬೆಳಗಿನ ಜಾವ ಆತಹತ್ಯೆಗೆ ಶರಣಾಗಿದ್ದಾರೆ.
ಪೋಷಕರ ಅಳಲು:
ನನ್ನ ಮಗನಿಗೆ ಪತ್ನಿಯ ಮನೆಯವರು ಚಿತ್ರಹಿಂಸೆ ಕೊಟ್ಟರು. ನಮಗೂ ನೋವು ಕೊಟ್ಟಿದ್ದಾರೆ. ಆದರೆ ಮಗ ಇದೆಲ್ಲವನ್ನೂ ಸಹಿಸಿಕೊಂಡಿದ್ದ. ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರೂ ಹಣ ಕೊಡಲು ನಿರಾಕರಿಸಿದ್ದರಿಂದ ಮೊಮ್ಮಗುವನ್ನು ಕರೆದುಕೊಂಡು 2021ರಲ್ಲಿ ಮನೆ ಬಿಟ್ಟು ಸೊಸೆ ಹೋದರು. ಅದಾದ ಬಳಿಕ ವರದಕ್ಷಿಣ ಪ್ರಕರಣ ಸೇರಿ ನನ್ನ ಮಗನ ಮೇಲೆ 9 ಸುಳ್ಳು ದೂರುಗಳನ್ನು ದಾಖಲಿಸಿದ್ದಾಳೆ. ಜೊತೆಗೆ ಆಕೆಯ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಅದನ್ನು ಮುಚ್ಚಿಟ್ಟು ಅವರ ಸಾವಿಗೆ ನನ್ನ ಮಗ ಕಾರಣ ಎಂದು ಬಿಂಬಿಸಲು ಯತ್ನಿಸಿದ್ದಳು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಟೆಕ್ಕಿ ಸಹೋದರ ಮಾತನಾಡಿ, ಅತ್ತಿಗೆ ಸುಖವಾಗಿರಲೆಂದು ಎಲ್ಲವನ್ನೂ ಅಣ್ಣ ಮಾಡಿದ್ದಾನೆ. ಆತ ನನ್ನ ಬಳಿಯಾಗಲಿ ಅಥವಾ ಅಪ್ಪನ ಬಳಿಯಾಗಲಿ ತನ್ನ ಕಷ್ಟವನ್ನು ಹೇಳಿಕೊಂಡಿರಲಿಲ್ಲ. ನನ್ನ ಅಣ್ಣನ ಸಾವಿಗೆ ನ್ಯಾಯ ಸಿಗಬೇಕಿದೆ ಎಂದು ನೊಂದು ನುಡಿದಿದ್ದಾರೆ.