Monday, April 21, 2025
Google search engine

Homeಅಪರಾಧತೆಲಂಗಾಣ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ತೆಲಂಗಾಣ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು

ನಾಗರಕರ್ನೂಲ್(ತೆಲಂಗಾಣ): ಮನೆಯ ಮೇಲ್ಛಾವಣಿ ಕುಸಿದು ತಾಯಿ, ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ನಾಗರಕರ್ನೂಲ್ ಜಿಲ್ಲೆಯ ವನಪಟ್ಲ ಗ್ರಾಮದಲ್ಲಿ ಇಂದು (ಸೋಮವಾರ) ಬೆಳಗ್ಗೆ ಸಂಭವಿಸಿದೆ.

ಓರ್ವ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಪದ್ಮಾ, ಪುತ್ರಿಯರಾದ ತೇಜಸ್ವಿನಿ, ವಸಂತ ಮತ್ತು ಪುತ್ರ ರುತ್ವಿಕ್ ಮೃತರು. ಭಾಸ್ಕರ್ (36) ಎಂಬವರು ಗಾಯಗೊಂಡಿದ್ದಾರೆ.

ಭಾನುವಾರ ಸಂಜೆ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಮಣ್ಣಿನಿಂದ ನಿರ್ಮಿಸಲಾದ ಮೇಲ್ಛಾವಣಿ ಕುಸಿದಿದೆ. ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರ ಮೇಲೆಯೇ ಮಣ್ಣು ಕುಸಿದು ಬಿದ್ದಿರುವುದರಿಂದ ಅವಶೇಷಗಳಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹೀಗಿದ್ದರೂ ಪದ್ಮಾ ಮತ್ತು ಮಕ್ಕಳ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ನಿರಂತರ ಮಳೆಯಿಂದಾಗಿ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಘಟನೆ ಸಂಭವಿಸಿರಬಹುದು. ಭಾಸ್ಕರ್ ಪವಾಡಸದೃಶ ರೀತಿಯಲ್ಲಿ ಪಾರಾದರು. ಆದರೆ ಅವರ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮಳೆಗಾಲದಲ್ಲಿ ಇಂತಹ ಪಾಳುಬಿದ್ದ ಮನೆಗಳಲ್ಲಿ ವಾಸಿಸದಂತೆ ಗ್ರಾಮಸ್ಥರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಂದಾಯ ವಿಭಾಗೀಯ ಅಧಿಕಾರಿ ಮತ್ತು ಮಂಡಲ ಕಂದಾಯ ಅಧಿಕಾರಿಗಳು ವಿಚಾರಣೆ ನಡೆಸಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular