ನವದೆಹಲಿ : ಭಾರತದಲ್ಲಿ ಜೂನ್ 21ರಂದು ನಡೆಯಲಿರುವ ನೀಟ್ ಯುಜಿ ಮರು ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸಕರಕಾರದ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ತೇಜಸ್ ಕರಿಯಾ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ನ್ಯಾಯಾಲಯವು ಇಂದು ನಂತರದ ಅವಧಿಯಲ್ಲಿ ಪ್ರಕರಣದ ತುರ್ತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ತನಿಖೆಯನ್ನು ಕೇಂದ್ರ ತನಿಖಾ ದಳ ನಡೆಸುತ್ತಿದೆ. ಈ ಹಿಂದೆ ಪರೀಕ್ಷೆ ನಡೆಯುವ ಮುನ್ನ ಪ್ರಶ್ನೆಪತ್ರಿಕೆಗಳನ್ನು ಪಿಡಿಎಫ್ ರೂಪದಲ್ಲಿ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಹಂಚಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಮುಂಬರುವ ಜೂನ್ 21ರ ಮರು ಪರೀಕ್ಷೆಯಲ್ಲೂ ಇಂತಹ ಯಾವುದೇ ಭದ್ರತಾ ಲೋಪಗಳು ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಸರ್ಕಾರದ ಈ ದಿಢೀರ್ ಕ್ರಮದ ವಿರುದ್ಧ ಟೆಲಿಗ್ರಾಮ್ ಈಗ ನ್ಯಾಯಾಲಯದಿಂದ ಪರಿಹಾರ ಕೋರಿದೆ.
ಇನ್ನೊಂದೆಡೆ, ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2020 ರ ಸೆಕ್ಷನ್ 69A ಅಡಿಯಲ್ಲಿ ದೇಶದ ಹಿತದೃಷ್ಟಿಯಿಂದ ಅತ್ಯಂತ ಅಲ್ಪಾವಧಿಗೆ ಮಾತ್ರ ಈ ನಿರ್ಬಂಧ ಹೇರಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಲಕ್ಷಾಂತರ ಪ್ರಾಮಾಣಿಕ ವಿದ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತು ಪರೀಕ್ಷೆಯ ಪಾರದರ್ಶಕತೆ ಕಾಪಾಡಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಂಸ್ಥೆ ಹೇಳಿದೆ.
ಇತ್ತೀಚಿನ ವಾರಗಳಲ್ಲಿ ಟೆಲಿಗ್ರಾಮ್‌ನಲ್ಲಿ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಹಲವು ಸಂಘಟಿತ ಚಾನೆಲ್‌ಗಳು ಸಕ್ರಿಯವಾಗಿದ್ದವು ಎಂದು ಎನ್‌ಟಿಎ ಮತ್ತು ಶಿಕ್ಷಣ ಸಚಿವಾಲಯ ನ್ಯಾಯಾಲಯಕ್ಕೆ ಮಾಹಿತಿ ನೀಡಿವೆ. ಈ ವಂಚಕರ ಜಾಲಗಳು ತಮ್ಮ ಚಾನೆಲ್‌ಗಳಿಗೆ ಪೇಪರ್ ಲೀಕ್ಡ್ ನೀಟ್, ರೀ-ನೀಟ್ 2026, ಖಾಸಗಿ ಮಾಫಿಯಾ ಹಾಗೂ ರೀ ನೀಟ್ ಮಾಫಿಯಾ ಎಂಬ ಹೆಸರುಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದವು.
ಮರು ಪರೀಕ್ಷೆಯ ಸಮಯದಲ್ಲಿ ಇಂತಹ ಚಾನೆಲ್‌ಗಳು ಸುಳ್ಳು ವದಂತಿಗಳನ್ನು ಹರಡುವುದನ್ನು ಮತ್ತು ಪರೀಕ್ಷಾ ವ್ಯವಸ್ಥೆಗೆ ಧಕ್ಕೆ ತರುವುದನ್ನು ತಡೆಯಲು ಈ ತಾತ್ಕಾಲಿಕ ನಿಷೇಧ ಅತ್ಯಂತ ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 21ರ ನೀಟ್ ಮರು ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಜೂನ್ 22ರವರೆಗೆ ಟೆಲಿಗ್ರಾಮ್ ಆಪ್ ಅನ್ನು ಬ್ಯಾನ್ ಮಾಡಿದೆ. ಈ ಬ್ಯಾನ್ ತೆರವುಗೊಳಿಸುವಂತೆ ಕೋರಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಇಂದು ಈ ಬಗ್ಗೆ ವಿಚಾರಣೆ ನಡೆಸಲಿದೆ.



