ಹಲಗೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಟಾಟಾ ಎಸಿ ವಾಹನ ಉರುಳಿ ಬಿದ್ದ ಪರಿಣಾಮ ಹುಚ್ಚೇಗೌಡನದೊಡ್ಡಿ ಗ್ರಾಮದ ಪದ್ಮ (40) ಮಹಿಳೆ ಮೃತಪಟ್ಟಿದ್ದು, 12 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಸ್ಕೂರು ಗ್ರಾಮ ಪಂಚಾಯತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡಲು ಹುಚ್ಚೇಗೌಡನದೊಡ್ಡಿ ಗ್ರಾಮದಿಂದ ಹುಲ್ಲೇಗಾಲ ಗ್ರಾಮಕ್ಕೆ ಸುಮಾರು ಹದಿನೈದು ಮಂದಿ ಕೂಲಿಕಾರರು ಗೂಡ್ಸ್ ವಾಹನದಲ್ಲಿ ಹೊರಟಿದ್ದರು.
ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನ ತಿರುವಿನಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿ ಹೊಡೆದಿದೆ. ಗಾಯಗೊಂಡ ಕೂಲಿ ಕಾರ್ಮಿಕರನ್ನು ಮಳವಳ್ಳಿ ಹಾಗೂ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಾಜಿ ಶಾಸಕ ಡಾ. ಕೆ ಅನ್ನದಾನಿ ಭೇಟಿ ನೀಡಿ ಯೋಗ ಕ್ಷೇಮವನ್ನು ವಿಚಾರಿಸಿ, ಮೃತ ಮಹಿಳೆಯರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.