ನವದೆಹಲಿ: ನೀಟ್ (NEET) ಮರುಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಜೂನ್ 22ರವರೆಗೆ ದೇಶದಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಆದೇಶ ಜಾರಿಗೊಂಡಿದೆ.
ಇದರ ಜೊತೆಗೆ ಟೆಲಿಗ್ರಾಂನ ‘ಮೆಸೇಜ್ ಎಡಿಟಿಂಗ್’ ವೈಶಿಷ್ಟ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಪೋಸ್ಟ್ ಮಾಡಿರುವ ಸಂದೇಶಗಳನ್ನು ನಂತರ ತಿದ್ದುಪಡಿ ಮಾಡಿ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಸಾಕ್ಷ್ಯ ಸೃಷ್ಟಿಸುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚಿನ ವಾರಗಳಲ್ಲಿ ‘Paper Leaked NEET’, ‘Re-NEET 2026’, ‘Private Mafia’ ಹಾಗೂ ‘REE NEET MAFIAA’ ಹೆಸರಿನ ಚಾನೆಲ್‌ಗಳು ಟೆಲಿಗ್ರಾಂನಲ್ಲಿ ಸಕ್ರಿಯವಾಗಿದ್ದವು. ಇವುಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ವದಂತಿಗಳು ಮತ್ತು ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಎನ್‌ಟಿಎ ಹಾಗೂ ಶಿಕ್ಷಣ ಸಚಿವಾಲಯ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದವು.
ಕಳೆದ ವರ್ಷದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿತ್ತು. ಈ ಹಿನ್ನೆಲೆ ಈ ಬಾರಿ ಯಾವುದೇ ಲೋಪವಾಗದಂತೆ ಎನ್‌ಟಿಎ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಜೂನ್ 21ರಂದು ನಡೆಯಲಿರುವ ಯುಜಿ-ನೀಟ್ 2026 ಮರುಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ವರದಿ ಮಾಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವಿ ಮಾಡಲಾಗಿದೆ.
ದೂರುಗಳನ್ನು ಸ್ವೀಕರಿಸಲು ಎನ್‌ಟಿಎ ವಿಶೇಷ ಆನ್‌ಲೈನ್ ಪೋರ್ಟಲ್‌ನ್ನು ಆರಂಭಿಸಿದ್ದು, ನಕಲಿ ವೆಬ್‌ಸೈಟ್‌ಗಳು, ಪ್ರಶ್ನೆಪತ್ರಿಕೆ ಅಥವಾ ಉತ್ತರ ಕೀ ಒದಗಿಸುವುದಾಗಿ ಹೇಳುವ ಖಾತೆಗಳು, ಹಣಕ್ಕೆ ಫಲಿತಾಂಶ ತರುವುದಾಗಿ ಆಮಿಷ ಒಡ್ಡುವ ವ್ಯಕ್ತಿಗಳು ಹಾಗೂ ನಕಲಿ ಎನ್‌ಟಿಎ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.
“ಯಾವುದೇ ಕಾರಣಕ್ಕೂ ಈ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದಿಲ್ಲ. ಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ವೀಕ್ಷಣೆಗೆ ಯಾರಿಗೂ ಅವಕಾಶವಿಲ್ಲ. ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡದೆ ಎಚ್ಚರಿಕೆಯಿಂದ ಇರಬೇಕು” ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಪರೀಕ್ಷೆಯ ವಿಶ್ವಾಸಾರ್ಹತೆ ಕಾಪಾಡಲು ಕೇಂದ್ರ ಮತ್ತು ಎನ್‌ಟಿಎ ಸಮನ್ವಯದಿಂದ ವ್ಯಾಪಕ ನಿಗಾವಹಿಸಿರುವುದಾಗಿ ತಿಳಿಸಿದೆ.



