ನವದೆಹಲಿ: ಭಾರತೀಯ ವಾಯುಸೇನೆ ಮೇಲೆ ನಡೆದ ಭಯೋತ್ಪಾದಕ ದಾಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೂರಿರುವ ಉಗ್ರರ ಕೃತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸ್ಥಳೀಯರ ನೆರವಿನ ಮೂಲಕ ಉಗ್ರರು ಭಾರತೀಯ ವಾಯುಸೇನಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಪೂಂಛ್ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಉಗ್ರರ ಸುಳಿವು ನೀಡಿದವರಿಗೆ ೨೦ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಪೂಂಚ್ ವಲಯದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಿಂದ ಭಾರತ ಕೆರಳಿದೆ. ಇದೀಗ ಸೇನಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೂಂಚ್ ಸೇರಿದಂತೆ ಸುತ್ತು ಮುತ್ತಲಿನ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಈ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಇಬ್ಬರು ಉಗ್ರರ ತಲಗೆ ತಲಾ ಹತ್ತು ಲಕ್ಷ ರೂಪಾಯಿಯಂತೆ ಒಟ್ಟು ೨೦ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಉಗ್ರರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸೇನೆ ಹೇಳಿದೆ.
ಪೂಂಛ್ ದಾಳಿ ಸಂಬಂಧ ಹಲವು ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಗ್ರರಿಗೆ ಆಹಾರ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸ್ಥಳೀಯರು ನೀಡಿದ್ದಾರೆ. ಈ ಭಯೋತ್ಪಾದಕರ ಹೆಡೆಮುರಿ ಕಟ್ಟಲು ಪಣತೊಟ್ಟಿರುವ ಭಾರತ ಒಂದಡೆ ಸತತ ಕಾರ್ಯಾಚರಣೆ ನಡೆಸಿದ್ದರೆ, ಮತ್ತೊಂದೆಡೆ ಉಗ್ರರ ಪತ್ತೆಗೆ ಇದೀಗ ರೇಖಾಚಿತ್ರ ಬಿಡುಗಡೆ ಮಾಡಿ ಪತ್ತೆ ಹಚ್ಚಲು ಮಂದಾಗಿದೆ.