ಪಿರಿಯಾಪಟ್ಟಣ: ತಂಬಾಕು ಪರವಾನಿಗೆ ಹೊಂದಿದವರು ನಿಗದಿತ ಪ್ರಮಾಣದ ತಂಬಾಕು ಮಾರಾಟ ಮಾಡದಿರುವುದಕ್ಕೆ ವಿಧಿಸುತ್ತಿದ್ದ ದಂಡದ ಹಣವನ್ನು ಶೇ.50 ರಷ್ಟು ಕಡಿತಗೊಳಿಸಿದ ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೊಯಲ್ ಸಂಸದ ಪ್ರತಾಪ್ ಸಿಂಹ ಮತ್ತು ತಂಬಾಕು ಮಂಡಳಿ ಹಿರಿಯ ಅಧಿಕಾರಿಗಳಿಗೆ ತಂಬಾಕು ಮಂಡಳಿ ಉಪಾಧ್ಯಕ್ಷ ಮಾಜಿ ಶಾಸಕರಾದ ಹೆಚ್.ಸಿ ಬಸವರಾಜು ರಾಜ್ಯದ ತಂಬಾಕು ರೈತರ ಪರ ಧನ್ಯವಾದ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಂಬಾಕು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಹಲವಾರು ಸಭೆಯಲ್ಲಿ ನಾನು ಹಾಗೂ ತಂಬಾಕು ಮಂಡಳಿ ಸದಸ್ಯರಾದ ವಿಕ್ರಂರಾಜ್ ಹಾಗೂ ಎಚ್.ಆರ್ ದಿನೇಶ್ ಗೌಡ ಅವರು ರೈತರಿಗೆ ವಿಧಿಸುತ್ತಿದ್ದ ದಂಡ ಪಾವತಿ ಸೇರಿದಂತೆ ರೈತರು ಎದುರಿಸುತ್ತಿದ್ದ ಹಲವು ಸಮಸ್ಯೆಗಳ ಬಗ್ಗೆ ಪರಿಹಾರಕ್ಕಾಗಿ ಒತ್ತಾಯಿಸಿದ್ದೆವು ಬಹು ದಿನಗಳ ನಮ್ಮ ಮನವಿಯನ್ನು ಪುರಸ್ಕರಿಸಿ ತಂಬಾಕು ಮಾರಾಟ ಮಾಡದೆ ಇದ್ದ ರೈತರು ಹಾಗೂ ನಿಗದಿತ ಗುರಿಗಿಂತ ಕಡಿಮೆ ತಂಬಾಕು ಮಾರಾಟ ಮಾಡಿದ ರೈತರಿಗೆ ವಿಧಿಸುತ್ತಿದ್ದ ದಂಡ ಕಡಿತಗೊಳಿಸಲಾಗಿದೆ, ಪ್ರತಿ ಲೈಸನ್ಸ್ ದಾರರಿಗೆ 1,750 ಕೆಜಿ ತಂಬಾಕು ಮಾರಾಟ ನಿಗದಿ ಮಾಡಲಾಗಿದ್ದು ಮಾರಾಟ ಗುರಿ ತಲುಪದ ರೈತರಿಗೆ ಈ ಹಿಂದೆ 3 ಸಾವಿರ ರುಾ ದಂಡ ವಿಧಿಸುತ್ತಿದ್ದು ಪ್ರಸ್ತುತ 1,500 ರೂ ನಿಗದಿ ಹಾಗೂ ಶೇ.25ಕ್ಕಿಂತ ಕಡಿಮೆ ತಂಬಾಕು ಮಾರಾಟ ಮಾಡುತ್ತಿದ್ದ ರೈತರಿಗೆ 5 ಸಾವಿರ ರೂ ದಂಡ ವಿಧಿಸುತ್ತಿದ್ದು ಪ್ರಸ್ತುತ 2.5 ಸಾವಿರ ರೂ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ, ಈಗಾಗಲೇ ಹೆಚ್ಚುವರಿ ದಂಡ ಪಾವತಿ ಮಾಡಿರುವ ರೈತರ ಬ್ಯಾಂಕ್ ಖಾತೆಗೆ ಕೆಲ ದಿನಗಳಲ್ಲಿಯೇ ಹಣ ಹಿಂದಿರುಗಿಸಲಾಗುವುದು ಎಂದರು.
2022-23ನೇ ಸಾಲಿನಲ್ಲಿ ರೈತರಿಗೆ 100 ಮಿಲಿಯನ್ ತಂಬಾಕು ಮಾರಾಟ ಅವಕಾಶ ಕಲ್ಪಿಸಿದ್ದು ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಸಮಸ್ಯೆಗಳಿಂದ ಕೇವಲ 60 ಮಿಲಿಯನ್ ನಷ್ಟು ತಂಬಾಕು ಮಾತ್ರ ಮಾರಾಟವಾಯಿತು ಪ್ರಸಕ್ತ ಸಾಲಿನಲ್ಲಿ ಸಹ 100 ಮಿಲಿಯನ್ ತಂಬಾಕು ಮಾರಾಟಕ್ಕೆ ಅವಕಾಶವಿದ್ದು ರೈತರು ಉತ್ತಮ ಗುಣಮಟ್ಟದ ತಂಬಾಕು ಬೆಳೆದು ಹೆಚ್ಚು ಆದಾಯ ಪಡೆಯಬೇಕು ಹಾಗೂ ಪ್ರಾಕೃತಿಕ ವಿಕೋಪಗಳಿಂದ ತಂಬಾಕು ಬೆಳೆ ನಾಶವಾದ ಸಂದರ್ಭ ಎರಡನೇ ಬೆಳೆ ಬೆಳೆದು ಆರ್ಥಿಕವಾಗಿ ಹೆಚ್ಚು ಸಬಲರಾಗಬೇಕು, ಈ ಬಾರಿ ಆಂಧ್ರ ರಾಜ್ಯದ ಮಾರುಕಟ್ಟೆಯಲ್ಲಿ ಗುಣಮಟ್ಟದ ತಂಬಾಕಿಗೆ ಸರಾಸರಿ 240 ರೂ ನಿಗದಿಯಾಗಿದ್ದು ಕರ್ನಾಟಕದಲ್ಲಿಯೂ ಇನ್ನು ಹೆಚ್ಚಿನ ದರ ನಿಗದಿಯಾಗುವ ವಿಶ್ವಾಸವಿದ್ದು ರೈತರು ಆತಂಕ ಪಡದೆ ಉತ್ತಮ ಗುಣಮಟ್ಟದ ತಂಬಾಕು ಬೆಳೆಯುವಂತೆ ತಿಳಿಸಿದರು.