Friday, April 18, 2025
Google search engine

Homeರಾಜ್ಯಆ. ೧೫ ರಂದು ಸ್ವಾತಂತ್ರ್ಯ ದಿನಾಚರಣೆ: ಕಾರ್ಯಕ್ರಮ ಅಚ್ಚುಕಟ್ಟಾಗಿರಲಿ, ಎಲ್ಲಾ ಕಡೆ ಧ್ವಜ ಸಂಹಿತೆ ಪಾಲನೆಗೆ...

ಆ. ೧೫ ರಂದು ಸ್ವಾತಂತ್ರ್ಯ ದಿನಾಚರಣೆ: ಕಾರ್ಯಕ್ರಮ ಅಚ್ಚುಕಟ್ಟಾಗಿರಲಿ, ಎಲ್ಲಾ ಕಡೆ ಧ್ವಜ ಸಂಹಿತೆ ಪಾಲನೆಗೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ: ಜಿಲ್ಲಾ ಆಡಳಿತದಿಂದ ಆಗಸ್ಟ್ ೧೫ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನೆರವೇರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಿದ್ದು ಎಲ್ಲಾ ಸರ್ಕಾರಿ ಕಚೇರಿ, ಶಾಲಾ, ಕಾಲೇಜು, ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡಬೇಕು. ಅಂದು ರಾಷ್ಟ್ರಧ್ವಜಾರೋಹಣ ಮಾಡುವ ವೇಳೆ ಧ್ವಜ ಸಂಹಿತೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ರಾಷ್ಟ್ರಧ್ವಜಕ್ಕೆ ಎಲ್ಲಿಯೂ ಚ್ಯುತಿಬಾರದಂತೆ ನೋಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡಬಾರದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಆ.೧೫ ರಂದು ಬೆಳಗ್ಗೆ ೯ ಗಂಟೆಗೆ ರಾಷ್ಟ್ರಧ್ವಜಾರೋಹಣ ಮಾಡುವರು. ಆಯಾ ಶಾಲಾ, ಕಾಲೇಜು, ಕಚೇರಿಗಳಲ್ಲಿ ಬೆಳಗ್ಗೆ ೭.೩೦ ರೊಳಗಾಗಿ ಕಾರ್ಯಕ್ರಮ ಮುಗಿಸಿಕೊಂಡು ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು, ರಾಷ್ಟ್ರೀಯ ಹಬ್ಬದಂದು ರಜೆ ಇದೆ ಎಂದು ಕೇಂದ್ರಸ್ಥಾನ ಬಿಡಬಾರದೆಂದು ಸೂಚಿಸಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವು ಇರಬೇಕು. ಈ ಬಗ್ಗೆ ಎಲ್ಲಾ ಶಾಲಾ, ಕಾಲೇಜುಗಳು, ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದರು.

ಧ್ವಜಾರೋಹಣದ ನಂತರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಭಾವ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ತಿಳಿಸಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ವಸತಿ ಶಾಲೆ ವಿದ್ಯಾರ್ಥಿಗಳಿಂದಲೂ ಕಾರ್ಯಕ್ರಮ ಆಯೋಜಿಸಲು ಮತ್ತು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡುವ ಮೂಲಕ ಎಲ್ಲಾ ಆಹ್ವಾನಿತರಿಗೆ ಸಕಾಲದಲ್ಲಿ ಆಹ್ವಾನ ಪತ್ರಿಕೆ ತಲುಪಿಸಲು ತಿಳಿಸಿದರು.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾನಗರದಲ್ಲಿನ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಸಿದ್ದತೆಗಾಗಿ ನೇಮಕ ಮಾಡುವ ಉಪ ಸಮಿತಿ ಸದಸ್ಯರು ಕಾರ್ಯೋನ್ಮೂಖರಾಗಲು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ಏರ್ಪಡಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular