ಬೆಂಗಳೂರು: ನಗರದಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಆರೆಂಸಿಯಾರ್ಡ್ ಠಾಣೆ ಪೊಲೀಸರು ಬಂಧಿಸಿ ೨೨೫ ಕೆಜಿ ಗಾಂಜಾ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಲಾರಿ ಸ್ಟ್ಯಾಂಡ್ ಬಳಿ ಬರುತ್ತಿದ್ದ ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ ಆಟೋದಲ್ಲಿ ಚಾಕಲೇಟ್‌ಗಳು ತುಂಬಿದ್ದ ೧೦ ಬಿಳಿ ಚೀಲಗಳಿರುವುದು ಕಂಡುಬಂದಿದೆ.
ಆರೋಪಿಯನ್ನು ವಿಚಾರಿಸಿದಾಗ ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನನ್ನು ಮಾಲು ಸಮೇತ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಪೀಣ್ಯ ಉಪವಿಭಾಗದ ಎಸಿಪಿ ಸದಾನಂದ ಎ.ತಿಪ್ಪಣ್ಣನವರ್, ಇನ್‌ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.