ಮಂಡ್ಯ: ನಾಳೆ ನಮ್ಮ ಪರ ತೀರ್ಪಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಗೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡ್ತೀವಿ. ಹತ್ತಾರು ವರ್ಷಗಳಿಂದ ಈ ಸಮಸ್ಯೆ ಬಂದಿದೆ. ಕೇವಲ ಒಂದು ಸರ್ಕಾರದಲ್ಲಿ, ಒಬ್ಬರ ಆಡಳಿತದಲ್ಲಿ ಈ ಸಮಸ್ಯೆ ಇಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಾತೀತವಾಗಿ ಕಾವೇರಿ ಸಮಸ್ಯೆ ಎದರಿಸಬೇಕೆಂದು ದೇವೇಗೌಡರು ಹೇಳಿದ್ದಾರೆ. ತಮಿಳುನಾಡು ಕೆಳಭಾಗದಲ್ಲಿದೆ ಹಾಗಾಗಿ ಬುದ್ದಿವಂತಿಕೆಯಿಂದ ಕೆಲಸ ಮಾಡಲು ಹೆಚ್ಚು ಅವಕಾಶ ಇದೆ. ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ಒಗ್ಗಟ್ಟಿನ ಹೆಜ್ಜೆ ಇಡಬೇಕು. ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ಕೈಜೋಡಿಸುವುದಾಗಿ ಹೇಳಿದ್ದಾರೆ.
ಸಂಕಷ್ಟ ಸೂತ್ರಕ್ಕಾಗಿ ಒತ್ತಾಯ ಮಾಡುತ್ತಿದ್ದೇವೆ. ಪ್ರಧಾನಿಗಳ ಭೇಟಿಗೆ ಸಿಎಂ ಸಮಯ ಕೇಳಿದ್ದು, ಸರ್ವಪಕ್ಷ ನಿಯೋಗ ಹೋಗಿ ಭೇಟಿ ಮಾಡಲಿದ್ದೇವೆ. ಪಿಎಂ ಇನ್ನು ಸಮಯ ಕೊಟ್ಟಿಲ್ಲ. ರೈತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ. ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‌ಎಸ್ ಅಣೆಕಟ್ಟುಗಳಿಂದ ಲೆಕ್ಕಹಾಕಿ ನೀರು ತಗೋತೀವಿ ಎಂದಿದ್ದಾರೆ.
ರೈತರ ಆತ್ಮಹತ್ಯೆ ವಿಚಾರವಾಗಿ ಡಿಕೆಶಿ ಹೇಳಿಕೆ ವಿಚಾರ ಕುರಿತು ಅವರ ಹೇಳಿಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಡಿಸಿಎಂ ಆಗಿ ಯಾವ ಆ್ಯಂಗಲ್ ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.
ಪರಿಹಾರಕ್ಕಾಗಿ ಆತ್ಮಹತ್ಯೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ರೈತ ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ರು, ಸರ್ಕಾರ ಅವರ ಪರ ನಿಂತು ಅವಕಾಶ ಇದ್ರೆ ಪರಿಹಾರ ನೀಡುತ್ತದೆ. ವೈಯಕ್ತಿಕ, ಸಾಲದ ಭಾದೆ ಯಾವುದೇ ಇದ್ರು ರೈತ ಕುಟುಂಬಕ್ಕೆ ಸಹಾನುಭೂತಿ ತೋರುವುದು ಜವಬ್ದಾರಿ. ಪರಿಹಾರ ವಿಚಾರ ಎರಡನೇ ಮಾತು. ಪರಿಹಾರ ಕೊಡಲೇ ಬೇಕು ಅನ್ನೋದು ಮುಖ್ಯ ಅಲ್ಲ. ಕೆಲವೊಮ್ಮೆ ನಮ್ಮ ಗೈಡ್ ಲೈನ್ಸ್ ವ್ಯಾಪ್ತಿಯಲ್ಲಿ ಪರಿಹಾರ ಕೊಡ್ತೀವಿ. ವ್ಯಾಪ್ತಿಗೆ ಬರದಿದ್ರೆ ಪರಿಹಾರ ಕೊಡಲಿಕ್ಕೆ ಬರಲ್ಲ. ಆದರೆ ಆ ಕುಟುಂಬಕ್ಕೆ ಸಮಾಧಾನ ಹೇಳುವುದು ಕರ್ತವ್ಯ ಎಂದು ಹೇಳಿದರು.
ಸ್ಟಾಲಿನ್ ಓಲೈಕೆಗೆ ನೀರು ಬಿಟ್ಟರೆಂಬ ಆರೋಪ ಕುರಿತು ಮಾತನಾಡಿ, ಸರ್ವಪಕ್ಷ ಸಭೆಯಲ್ಲಿ ಈ ವಾದ ಮಾಡಲಿ. 28 ಎಂಪಿ ಬಿಜೆಯವರು ಒಂದು ಮಾತು ಹೇಳಿಲ್ಲ. ಕಾವೇರಿ ಪ್ರಾಧಿಕಾರ ಕೇಂದ್ರದ ಹಿಡಿತದಲ್ಲಿದೆ. ಬುದ್ದಿವಂತಿಕೆಯಿಂದ ರೈತರ ಹಿತ ಕಾಯಬೇಕೆಂದು ಸುಮ್ಮನಿದ್ದೇವೆ. ಪ್ರಧಾನಿಗಳ ಬಳಿ ಹೋಗಿ ನಮ್ಮ ಭೇಟಿಗೆ ಸಮಯ ಕೊಡಿಸಿ. ಮಾತನಾಡಿದರೆ ನ್ಯಾಯ ಸಿಗಲ್ಲ, ಬುದ್ದಿವಂತಿಕೆಯಿಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ತಮಿಳುನಾಡಿನ ಸಿಎಂ ಪುತ್ರನ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಆ ವಿಚಾರ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾವುದೇ ಧರ್ಮ ಧರ್ಮಕ್ಕೆ ಕೆಟ್ಟ ಪ್ರವೃತ್ತಿ ಬೆಳೆಸಿ ಅಂತ ಹೇಳಲ್ಲ. ಧರ್ಮ ಅಂದ್ರೆ ಎಲ್ಲರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವಂತದು. ಒಬ್ಬೊಬ್ಬರು ಒಂಥರ ಹೇಳ್ತಾರೆ. ಆ ವಿಚಾರಕ್ಕೆ ತಲೆಕೆಡಿಸಿಕೊಳ್ಳೋದು ಬೇಡ ಎಂದಿದ್ದಾರೆ.
ರಾಜ್ಯ ಸರ್ಕಾರ ಎಂಪಿ ಚುನಾವಣೆ ಬಳಿಕ ಬೀಳುತ್ತೆ ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿ, ಜೆ ಹೆಚ್ ಪಾಟೇಲರು ಹೇಳಿದ್ರಲ್ಲ ಅದನ್ನೆ ಹಾಕಿಕೊಳ್ಳಿ. ನನಗೆ ಹೇಳೋಕೆ ಬರಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.