ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮಸ್ಥರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲ್ಯಾಣಿ ಬಾಯ್ಸ್ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಚಿಕ್ಕಡಿ ಗಾಡಿ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆಯಿತು.
ಗ್ರಾಮದ ಎಸ್.ಡಿ.ಜಯರಾಮ್ ಕ್ರೀಡಾಂಗಣದಲ್ಲಿ ಚಿಕ್ಕಡಿ ಗಾಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲು ಒಂದು ತಿಂಗಳಿನಿಂದ ನಿರಂತರವಾಗಿ ಸಕಲ ಸಿದ್ದತೆಗಳನ್ನು ಕಲ್ಯಾಣಿ ಬಾಯ್ಸ್ ವತಿಯಿಂದ ಮಾಡಿಕೊಳ್ಳಲಾಗಿತ್ತು.
ಸ್ಪರ್ಧೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ 68 ಕ್ಕೂ ಹೆಚ್ಚು ಜೋಡಿ ಎತ್ತುಗಳ ಆಗಮಿಸಿದ್ದವು, ಯುವ ರೈತರು ಚಿಕ್ಕಡಿ ಗಾಡಿಯಲ್ಲಿ ಎತ್ತುಗಳನ್ನು ಕಟ್ಟಿಕೊಂಡು ವೇಗವಾಗಿ ಓಡುತ್ತಿದ್ದರೆ ಕ್ರೀಡಾಂಗಣದಲ್ಲಿ ನೆರದಿದ್ದ ಗ್ರಾಮಸ್ಥರ ಹರ್ಷೋದ್ಧಾರ ಮುಗಿಲು ಮುಟ್ಟಿತ್ತು. ಒಂದು ಬಾರಿಗೆ 2 ಜತೆ ಚಿಕ್ಕಡಿ ಗಾಡಿಯಲ್ಲಿ ಎತ್ತಿನ ಸ್ಪರ್ಧೆಯಲ್ಲಿ ಬಿಡಲಾಗುತಿತ್ತು. ಈ ವೇಳೆ ಗೆಲ್ಲಬೇಕು ಎಂಬ ಉದ್ದೇಶದಿಂದ ವೇಗವಾಗಿ ಗಾಡಿಯನ್ನು ಓಡಿಸುತ್ತಿದ್ದದ್ದು ಕಂಡು ಬಂತು.
ಚಿಕ್ಕಡಿ ಗಾಡಿ ಓಟದ ಸ್ಪರ್ಧೆಯನ್ನು ನೋಡಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ಮತ್ತು ಸಾರ್ವಜನಿಕರು ಆಗಮಿಸಿ ಸ್ಪರ್ಧೆಗೆ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದರು. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಮತ್ತು ಅಂಬುಲೆನ್ಸ್ ವಾಹನವನ್ನು ನಿಯೋಜನೆ ಮಾಡಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 40 ಸಾವಿರ ನಗದು, ಪಾರಿತೋಷಕ, ದ್ವಿತೀಯ ಬಹುಮಾನ 30 ಸಾವಿರ ನಗದು, ಪಾರಿತೋಷಕ, ತೃತೀಯ ಬಹುಮಾನ 20 ಸಾವಿರನಗದು, ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನ 10 ಸಾವಿರ ನಗದು, ಪಾರಿತೋಷಕ ವನ್ನು ನೀಡಲಾಗುವುದು. ಸ್ಪರ್ಧೆ ತಡ ರಾತ್ರಿಯ ವರೆಗೆ ನಡಯುವುದರಿಂದ ಬಹುಮಾನವನ್ನು ಸೋಮವಾರ ಬೆಳಗ್ಗೆ ವಿತರಣೆ ಮಾಡಲಾಗುವುದು ಎಂದು ಮುಖಂಡ ಗುಂಡ ಮಹೇಶ್ ತಿಳಿಸಿದರು.
ರಾಣಿ ಐಶ್ವರ್ಯ ಬಿಲ್ಡರ್ಸ್ ಮತ್ತು ಡೆವಲಪರ್ಸ್ನ ಮುಖ್ಯಸ್ಥ ಪ್ರಣಮ್ ಸತೀಶ್ ಸ್ಪರ್ಧೆಗೆ ಚಾಲನೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಅಧ್ಯಕ್ಷತೆ ವಹಿಸಿದ್ದರು.ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ ಜಯರಾಮ್, ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾಶಂಕರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ನಗರಕೆರೆ ಸಂದೀಪ್, ಮುಖಂಡ ಜಿ.ಎಲ್.ಅರವಿಂದ್, ವಳಗೆರೆಹಳ್ಳಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಆಗಮಿಸಿದ್ದರು.