ಉಡುಪಿ : ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಆದರೆ ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ. ಅವರಿಗೆ ನಾವು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ತಮ್ಮ ಹಾಗೂ ಪುತ್ರನ ಫೋಟೋ ಜೊತೆ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಸಿಎಂ ಎಂದು ಬಿಂಬಿಸುವ ಬ್ಯಾನರ್‌ಗಳು ಹಾಕಲಾಗಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯವೇ? ಕಾರ್ಯಕರ್ತರು ಅಭಿಮಾನದಿಂದ ಬ್ಯಾನರ್ ಹಾಕುತ್ತಾರೆ. ಅವರ ಭಾವನೆಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದರು.
ಇನ್ನು ಸಚಿವ ಸಂಪುಟ ಪುನರ್‌ರಚನೆ ಸೇರಿದಂತೆ ಎಲ್ಲ ರಾಜಕೀಯ ವಿಚಾರಗಳನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತರಿಂದ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್, ಬ್ಯಾನರ್‌ಗಾಗಿ ಸಾವಿರ ರೂಪಾಯಿ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಯಾವುದೇ ಹಣ ಸಂಗ್ರಹಿಸಿಲ್ಲ. ಆಡಳಿತ ವೆಚ್ಚದಿಂದ ಅದನ್ನು ಭರಿಸಿದ್ದೇವೆ. ಅಗತ್ಯವಿದ್ದರೆ ತನಿಖೆ ನಡೆಸುತ್ತೇವೆ. ಯಾರೇ ಹಣ ವಸೂಲಿ ಮಾಡಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.



