Friday, April 18, 2025
Google search engine

Homeಅಪರಾಧನಿಯಂತ್ರಣ ತಪ್ಪಿ ಡಿವೈಡರ್‌ ಗೆ ಬೈಕ್ ಢಿಕ್ಕಿ; ಓರ್ವ ಸಾವು, ಇನ್ನೋರ್ವನಿಗೆ ಗಾಯ

ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಬೈಕ್ ಢಿಕ್ಕಿ; ಓರ್ವ ಸಾವು, ಇನ್ನೋರ್ವನಿಗೆ ಗಾಯ

ಬೆಂಗಳೂರು: ದ್ವಿಚಕ್ರ ವಾಹನ ಓಡಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕುರುಬರಹಳ್ಳಿಯ ಕುಮಾರಸ್ವಾಮಿ (28) ಮೃತ ಸವಾರ. ಬೊಮ್ಮನಹಳ್ಳಿ ನಿವಾಸಿ ನವೀನ್‌ ಕುಮಾರ್‌ ಗಾಯಗೊಂಡ ಹಿಂಬದಿ ಸವಾರ.

ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಬೊಮ್ಮನಹಳ್ಳಿ ಆಕ್ಸ್‌ ಫ‌ರ್ಡ್‌ ಕಾಲೇಜು ಸಮೀಪದ ಸರ್ವೀಸ್‌ ರಸ್ತೆಯಲ್ಲಿ ಅಪಘಾತ ಸಂಭವಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಸವಾರ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಶಿವಮೊಗ್ಗ ಮೂಲದ ನವೀನ್‌ ಕುಮಾರ್‌ ಬೊಮ್ಮನಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ತಡ ರಾತ್ರಿ ಟಿ-20 ವರ್ಲ್ಡ್ ಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಇದ್ದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕೆಲಸ ಮುಗಿಸಿಕೊಂಡು ರಾತ್ರಿ ಬೊಮ್ಮನಹಳ್ಳಿಯ ಸ್ನೇಹಿತ ನವೀನ್‌ ಕುಮಾರ್‌ ಅವರ ರೂಮ್‌ಗೆ ತೆರಳಿದ್ದ. ಇಬ್ಬರು ಟೀವಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್‌ ಪಂದ್ಯ ವೀಕ್ಷಿಸಿದ್ದು, ಫೈನಲ್‌ನಲ್ಲಿ ಭಾರತ ತಂಡ ಗೆದ್ದಿತ್ತು. ಭಾರತ ಟಿ20 ವಿಶ್ವಕಪ್‌ ಗೆಲುವು ಸಾಧಿಸಿದ್ದ ಖುಷಿಯಲ್ಲಿ ಸ್ನೇಹಿತರಿಬ್ಬರೂ ದ್ವಿಚಕ್ರ ವಾಹನದಲ್ಲಿ ಮುಂಜಾನೆ ಬೊಮ್ಮನಹಳ್ಳಿಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದರು. ಮಾರ್ಗಮಧ್ಯೆ ಬೊಮ್ಮನಹಳ್ಳಿಯ ಆಕ್ಸ್‌ಫ‌ರ್ಡ್‌ ಕಾಲೇಜು ಸಮೀಪದ ಸರ್ವಿಸ್‌ ರಸ್ತೆಯಲ್ಲಿ ಹೋಗುವಾಗ ಕುಮಾರಸ್ವಾಮಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ದ್ವಿಚಕ್ರ ವಾಹನ ಸಹಿತ ರಸ್ತೆ ವಿಭಜಕದ ಮೇಲೆ ಬಿದ್ದಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ: ಬೈಕ್‌ ಚಾಲಕ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್‌ ಧರಿಸಿದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಸವಾರ ಕುಮಾರಸ್ವಾಮಿ ಮಾರ್ಗಮಧ್ಯೆ ಮೃತಪಟ್ಟಿರು ವುದಾಗಿ ದೃಢಪಡಿಸಿದ್ದಾರೆ. ಹಿಂಬದಿ ಸವಾರ ನವೀನ್‌ ಕುಮಾರ್‌ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತ ಸವಾರ ಕುಮಾರಸ್ವಾಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅತಿವೇಗವೇ ಅಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಲ್ಮೆಟ್‌ ಧರಿಸಿದ್ದರೆ ಸವಾರ ಕುಮಾರಸ್ವಾಮಿ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಮಡಿವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular