ತುಮಕೂರು : ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಹುಡುಗಿ ತಾನು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವಕನಿಗೆ ಕೈಕೊಟ್ಟು ಮದುವೆಯಾಗಲು ಮುಂದಾಗಿದ್ದಾಳೆ. ಆದರೆ, ತಾಳಿ ಕಟ್ಟುವ ವೇಳೆ ಸಿನಿಮಾ ಶೈಲಿಯಲ್ಲಿ ಹುಡುಗನಿಕೆ ಕೈಕೊಟ್ಟು, ಪ್ರೀತಿಸಿದವನೇ ಬೇಕು ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.
ಹೌದು, ಕಳೆದೊಂದು ತಿಂಗಳಿಂದ ಮನೆಯವರು ಭರ್ಜರಿ ಮದುವೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ನಿನ್ನೆ ರಾತ್ರಿ ವೇಳೆ ಆರತಕ್ಷತೆ ನಡೆದಿದ್ದು, ಯುವತಿ ಕೂಡ ನಗು ನಗುತ್ತಲೇ ವರನೊಂದಿಗೆ ಫೋಟೋಗೆ ಪೋಸ್ ಕೊಟ್ಟು ಮನೆಯವರಿಂದ ಸೈ ಎನಿಸಿಕೊಂಡಿದ್ದಾಳೆ. ಇಂದು ಬೆಳಗ್ಗೆ ತಾಳಿ ಕಟ್ಟುವುದಕ್ಕೂ ಮುನ್ನ ಮಾಡುವ ಎಲ್ಲ ಶಾಸ್ತ್ರಗಳನ್ನು ಮಾಡಿ, ಮಂತ್ರವನ್ನೂ ಹೇಳಲಾಗಿದೆ. ಇನ್ನೇನು ತಾಳಿ ಕಟ್ಟವುದಕ್ಕೆ ಗಟ್ಟಿಮೇಳ ವಾದ್ಯದ ಶಬ್ದ ಹೊರಹೊಮ್ಮುತ್ತಿದ್ದು, ಎಲ್ಲರೂ ಎದ್ದುನಿಂತು ಅಕ್ಷತೆಗಳನ್ನು ಹಾಕಲು ಸಿದ್ಧವಾಗಿದ್ದಾರೆ. ವಧುವಿನ ಕುತ್ತಿಗೆಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ, ಕೂಡಲೇ ಕೈ ಅಡ್ಡ ಹಿಡಿದು ತನಗೆ ಈ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.
ತಾಳಿ ಕಟ್ಟಬೇಡಿ ಎಂದು ಹಸೆಮಣೆಯಿಂದ ಎದ್ದ ವಧು: ಇನ್ನು ತಾಳಿ ಕಟ್ಟುವ ಶುಭವೇಳೆ ಹಸೆಮಣೆಯಿಂದ ಎದ್ದುಹೋದ ಯುವತಿಗೆ ಪೋಷಕರು ಹಾಗೂ ವರನ ಕಡೆಯವರು ಮದುವೆ ಬೇಡ ಎನ್ನುವುದಕ್ಕೆ ಕಾರಣ ಕೇಳಿದಾಗ ತಾನು ಇನ್ನೊಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದ್ದರಿಂದ ಈ ಮದುವೆ ತಾಳಿ ಕಟ್ಟುವ ಶುಭ ವೇಳೆಯಲ್ಲಿ ಮುರಿದು ಬಿದ್ದಿದೆ. ಈ ಘಟನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ನಡೆದಿದೆ. ಮದುವೆ ನಿರಾಕರಿಸಿದ ವಧುವನ್ನು ದಿವ್ಯ ಎಂದು ಹೇಳಲಾಗುತ್ತಿದೆ.
ಪೊಲೀಸ್ ಠಾಣೆಯಲ್ಲಿ ಮಾತುಕಥೆ: ಮತ್ತೊಂದೆಡೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದ ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್ (ವರ) ಸ್ಥಿತಿ ತೀವ್ರ ಗೊಂದಲಕ್ಕೆ ಸಿಲುಕಿದೆ. ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಶುರುವಾಗಿದೆ. ಕೆಲವರು ಯುವತಿಯನ್ನು ಮನವೊಲಿಸಲು ಮುಂದಾಗಿದ್ದರೂ, ಎಷ್ಟೇ ಬುದ್ಧಿ ಹೇಳಿದರೂ ಯುವತಿ ಮಾತ್ರ ತನಗೆ ಈ ಮದುವೆ ಬೇಡವೆಂದು ನಿರಾಕರಣೆ ಮಾಡಿದ್ದಾಳೆ. ಇನ್ನು ಎರಡೂ ಮನೆಯವರ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಈಗ ಮದಿವೆ ಸಂಬಂಧ ಕೊಳಾಲ ಪೊಲೀಸ್ ಠಾಣೆಯಲ್ಲಿ ಎರಡೂ ಮನೆಯವರನ್ನು ಕೂರಿಸಿ ಮಾತುಕಥೆ ಮಾಡಲಾಗುತ್ತಿದೆ.