Sunday, April 20, 2025
Google search engine

Homeಸ್ಥಳೀಯಬುದ್ಧರ ಧಮ್ಮ ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ

ಬುದ್ಧರ ಧಮ್ಮ ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ


ಮೈಸೂರು: ಬುದ್ಧರ ಧಮ್ಮ ಜಗತ್ತಿನ ಎಲ್ಲಾ ಮಾನವ ಜೀವಿಗಳನ್ನು ತನ್ನೊಳಗೆ ಅಪ್ಪಿಕೊಳ್ಳುತ್ತದೆ. ಬೋಧಿಸತ್ವ ಪಡೆಯಲು ಬಿಕ್ಕುಗಳೇ ಆಗಬೇಕಿಲ್ಲ, ಚೀವರವನ್ನೇ ತೊಡಬೇಕಿಲ್ಲ. ಸಾಮಾನ್ಯರು ಕೂಡ ಭೋದಿತ್ವ ಪಡೆಯಬಹುದು ಎಂದು ಭಂತೆ ಡಾ.ಕಲ್ಯಾಣಸಿರಿ ತಿಳಿಸಿದರು.
ಧಮ್ಮಚಕ್ಕಪವತ್ತನ ದಿನದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಧಮ್ಮಚಕ್ಕಪವತ್ತನದ ಮಹತ್ವ ಮತ್ತು ಸಮಕಾಲೀನ ಸಮಾಜ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಮ್ಮ ಎಂದರೇ ಸತ್ಯವಾದದ್ದು, ಧಮ್ಮವು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿ ಆಚರಿಸುವುದಲ್ಲ. ಹಾಗೆ ಆಚರಿಸಿದರೆ ಅದು ಧರ್ಮವಾಗುತ್ತದೆ, ಧಮ್ಮವಾಗುವುದಿಲ್ಲ. ಧಾರ್ಮಿಕ ಆಚರಣೆಗಳನ್ನು ಮೀರಿದ್ದು ಧಮ್ಮ. ಧಮ್ಮವೆಂದರೆ ಜೀವನದ ಮಾರ್ಗ, ನಿಬ್ಬಾಣದ ಮಾರ್ಗ, ಜ್ಞಾನೋದಯದ ಮಾರ್ಗ, ಸನಾರ್ಗದ ಮಾರ್ಗ. ಧಮ್ಮವು ಸದ್ಧಮವಾದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಈ ದೃಷ್ಟಿಯಲ್ಲಿ ಧಮ್ಮವನ್ನು ಅರಿಯಬೇಕು ಎಂದು ಬುದ್ಧರು ಭೋದಿಸಿದ್ದು ಎಂದರು.
ಧಮ್ಮಚಕ್ಕಪವತ್ತನ ದಿನ ಬುದ್ಧರು ತಮಗೆ ಪ್ರಾಪ್ತವಾದ ಜ್ಞಾನೋದಯದ ಸಾರವನ್ನು ಐದು ಜನರಿಗೆ ಪ್ರಥಮವಾಗಿ ಭೋದಿಸಿದ ದಿನ, ಧಮ್ಮ ಬೋಧನೆ ಅಥವಾ ಚಕ್ರ ಉರುಳಲು ಪ್ರಾರಂಭವಾದ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಬುದ್ಧರು ಜಗತ್ತಿನ ದುಃಖಕ್ಕೆ ಪರಿಹಾರೋಪಾಯವಾಗಿ ಎರಡು ಅತಿರೇಖಗಳು, ನಾಲ್ಕು ಅರಿಯ ಸತ್ಯಗಳು, ಅಷ್ಟಾಂಗ ಮಾರ್ಗಗಳು ಮತ್ತು ಪಂಚಶೀಲಗಳನ್ನು ತನ್ನ ಐದು ಜನ ಶಿಷ್ಯರಿಗೆ ಭೋದಿಸಿದರು.
ಬುದ್ಧರು ಭೋದಿಸಿದ ಈ ಮಾರ್ಗದಲ್ಲಿ ನಡೆದರೆ ಜಗತ್ತಿನ ದುಃಖವನ್ನು ನಿವಾರಿಸಬಹುದು. ದುಃಖವು ಮಾನವನಲ್ಲಿರುವ ದುರಾಸೆಯಿಂದ ಉಂಟಾಗುತ್ತದೆ. ತೃಷ್ಣೆ, ಬಯಕೆ, ಹಂಬಲ, ದುರಾಸೆಗಳಿಂದ ದೂರವಾದರೆ ದುಃಖದ ನಿವಾರಣೆ ಸಾಧ್ಯ ಎಂದರು.
ಬುದ್ಧರು ಅನಾತತೆ ಬೋಧಿಸಿದರು. ಆತ ಭ್ರಮೆಯ ಕಲ್ಪನೆಗೆ ಒಳಪಟ್ಟಿರುತ್ತದೆ. ಅವುಗಳನ್ನು ಮೀರಬೇಕು. ಬುದ್ಧರ ಮಧ್ಯಮಮಾರ್ಗ ಅತ್ಯಂತ ಶ್ರೇಷ್ಠ ಮಾರ್ಗವೆಂದು ಹೇಳಿದರು.
ಎಲ್ಲಾ ದಾನಕ್ಕಿಂತ ಧಮ್ಮದಾನವೇ ಶ್ರೇಷ್ಠವಾದದ್ದು. ಎಲ್ಲ ರುಚಿಗಳಿಗಿಂತ ಧಮ್ಮದ ರುಚಿಯೇ ಮಿಗಿಲಾದದ್ದು, ಎಲ್ಲಾ ಸುಖಗಳಿಗಿಂತ ಧಮ್ಮದ ಸಂತೋಷವೇ ಅಪೂರ್ವವಾದದ್ದು ಅದನ್ನು ಪ್ರತಿಯೊಬ್ಬರು ಪಡೆಯಬೇಕು ಎಂದರು.
ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಮಾತನಾಡಿ, ಬುದ್ಧರು ಕೇವಲ ತಮ್ಮ ಕಾಲಕ್ಕೆ ಸೀಮಿತವಾಗಿ ಅಥವಾ ಜಾತಿ, ಧರ್ಮಕ್ಕೆ ಸೀಮಿತವಾಗಿ ಏನನ್ನು ಭೋದಿಸಲಿಲ್ಲ. ಅವರ ಬೋಧನೆಗಳೆಲ್ಲವೂ ಕಾಲಾತೀತವಾದವು ಎಂದರು.
ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ಉಪಸ್ಥಿತರಿದ್ದರು. ಕೇಂದ್ರದ ಬೋಧಕರು, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular