ಚಿಕ್ಕಬಳ್ಳಾಪುರ: ಪಟ್ಟಣದ ಸಮೀಪ ಬಾಗೇಪಲ್ಲಿಯಿಂದ ಗುಡಿಬಂಡೆಗೆ ಬರುತ್ತಿದ್ದ ಸಾರಿಗೆ ಬಸ್ ನ ಚಾಲಕ ಅತಿ ವೇಗ ಮತ್ತು ಅಜಾಗ್ರತೆಯಿಂದ ಬಸ್ ಚಾಲನೆ ಮಾಡಿದ ಕಾರಣ ಬಸ್ ನಲ್ಲಿದ್ದ ಮಗು ಸೇರಿದಂತೆ ಸುಮಾರು ೧೦ ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಗುಡಿಬಂಡೆ ಹೊರವಲಯದ ಉಪ್ಪಾರಹಳ್ಳಿ ಬಳಿ ನಡೆದಿದೆ.
ಬಾಗೇಪಲ್ಲಿಯಿಂದ ಗುಡಿಬಂಡೆಗೆ ಬರುತ್ತಿದ್ದ ಸಾರಿಗೆ ಬಸ್ ಒಂದು ಪಟ್ಟಣದ ಸಮೀಪದ ಉಪ್ಪಾರಹಳ್ಳಿ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜಮೀನುಗಳಿಗೆ ನುಗ್ಗಿದ್ದು, ಬಸ್ ಲ್ಲಿದ್ದ ಮಗು ಸೇರಿದಂತೆ ೧೦ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಬಸ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿರುವುದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಬಸ್ ಮುಂಭಾಗದ ಎರಡು ಚಕ್ರಗಳು ಕಿತ್ತು ಬಂದಿದ್ದು, ಬಸ್ ನಲ್ಲಿದ್ದ ೧೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ತೀವ್ರತರವಾದ ಗಾಯಗಳಾದರೆ, ನಿರ್ವಾಹಕ ಸಹಿತ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.