ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ? ಎಂದು ಬಿಜೆಪಿ ನಾಯಕರನ್ನು ಕೇಳಬಯಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆ ನಡೆಯುತ್ತಿದೆ. ಜನರು ಪರದಾಡುತ್ತಿದ್ದು, ಹೊಟೇಲ್ ಗಳು ಬಂದ್ ಆಗುತ್ತಿವೆ. ಜನ ವಿದ್ಯುತ್ ಒಲೆ ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ 10% ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು?” ಎಂದು ಲೇವಡಿ ಮಾಡಿದರು.
ಯುದ್ಧಗಳ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ” ಎಂದರು.
“ಜನರನ್ನ ಕೇಂದ್ರ ಸರ್ಕಾರ ಫೂಲ್ ಮಾಡುತ್ತಿದೆ. ನಾವು ಪಾದಯಾತ್ರೆ ಮಾಡಿದಾಗ ಈ ಬೆಲೆ ಏರಿಕೆ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದು, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿ ಅವರಿಗೆ ಶಕ್ತಿ ತುಂಬಿದ್ದೇವೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕವಾಗಿ ರಕ್ಷಣೆ ನೀಡಿವೆ” ಎಂದು ಹೇಳಿದರು.



