ಮೈಸೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಅನ್ಯಾಯವನ್ನೂ ಮಾಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವು ತಾನು ಮಾಡಿರುವ ಬೆಲೆ ಏರಿಕೆ ಸಮರ್ಥನೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಬಳಸಬಾರದು. ಪುಣ್ಯಾತ್ಮ ಮೋದಿ ಅವರು ಗ್ಯಾಸ್ ಸಿಲಿಂಡರ್ ಅನ್ನು 300ರೂ. ಕಡಿಮೆ ಮಾಡಿ, ಈಗ 50ರೂ. ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಅನ್ಯಾಯವನ್ನೂ ಮಾಡಿಲ್ಲ ಎಂದು ತಿಳಿಸಿದರು.
ಮೋದಿ ಅಧಿಕಾರಕ್ಕೆ ಬರುವ ಮುನ್ನ ರಾಜ್ಯಕ್ಕೆ ಶೇ ೩೧ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಈಗ ಶೇ 42ರಷ್ಟು ಬರುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯಕ್ಕೆ 10 ವರ್ಷದಲ್ಲಿ 81,791 ಕೋಟಿ ರೂ. ಸಿಕ್ಕಿದ್ದರೆ, ಮೋದಿ ಸರ್ಕಾರ ಇದಕ್ಕೂ ಹೆಚ್ಚಿನ ಪಾಲನ್ನು ಕೊಟ್ಟಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ಜಾಣ ಮರೆವಿದೆ. ಗೋಬೆಲ್ಸ್ ಸಿದ್ಧಾಂತದ ಮೇಲೆ ಅವರಿಗೆ ನಂಬಿಕೆ. ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯ ಮಾಡುವುದನ್ನು ಗೋಬೆಲ್ಸ್ ನೋಡಿದ್ದರೆ, ಸಿದ್ದರಾಮಯ್ಯ ತನ್ನ ಪ್ರೀತಿಯ ಶಿಷ್ಯ ಎನ್ನುತ್ತಿದ್ದರು. ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಸಿದ್ದರಾಮಯ್ಯ ಅವರ ಕಲೆ ಎಂದು ಟೀಕಿಸಿದರು.