ಬೆಂಗಳೂರು: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪಾವತಿಸಿರುವ ಕಂತಿನ ಹಣ ಎಷ್ಟು? ಈವರೆಗೆ ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೋಮವಾರ ಆಗ್ರಹಿಸಿದ್ದಾರೆ.
ಇನ್ನೂ ಸದನದಲ್ಲಿ ಬೆಳೆ ವಿಮೆ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಶ್ವರ್ ಖಂಡ್ರೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಯೋಜನೆಯನ್ನು ಬಿಜೆಪಿ ಪ್ರಾಯೋಜಿತ ‘ಗೋಲ್ಮಾಲ್’ ಎಂದು ಕರೆದಿರುವ ಸಚಿವರು, ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಖಾಸಗಿ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೇಗೆ ಲಾಭ ಮಾಡಿಕೊಡುತ್ತಿದೆ ಎನ್ನುವುದು ಬಟಾಬಯಲಾಗಲಿದೆ ಎಂದು ಹೇಳಿದ್ದು, ದೇಶಾದ್ಯಂತ ಬೆಳೆ ವಿಮೆ ಯೋಜನೆ ಜಾರಿಯಾದ ದಿನದಿಂದ ಈವರೆಗೆ ವಿಮಾ ಕಂಪನಿಗಳು ಉದ್ದಾರ ಆಗಿದೆಯೇ ಹೊರತು ರೈತರಲ್ಲ. ಇದೊಂದು ಬಿಜೆಪಿ ಪ್ರಾಯೋಜಿತ ಪಕ್ಕಾ ಗೋಲ್ಮಾಲ್ ಯೋಜನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಕೋವಿಡ್ ಸಮಯದಲ್ಲಿ ಜನರು ಆಕ್ಸಿಜನ್ ಸಿಗದೆ ರೆಮಿಡಿ ಸಿವೀರ್ ಚುಚ್ಚುಮದ್ದು ಸಿಗದೆ, ಉದ್ಯೋಗವೂ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾಗ ಮನೆಯಲ್ಲಿ ಬಾಗಿಲು ಮುಚ್ಚಿ ಕುಳಿತಿದ್ದ ಖೂಬಾ ಈಗ ಬೀದಿಯಲ್ಲಿ ನಿಂತು ವೀರಾವೇಷದಿಂದ ಮಾತನಾಡಿದರೆ ಜನ ನಂಬುವುದಿಲ್ಲ. ರಾಜ್ಯದ ಜನರಿಗೆ ಸತ್ಯದ ಅರಿವಿದೆ. ಖೂಬಾಗೆ ಮಾಡಲು ಕೆಲಸವಿಲ್ಲ. ಈಗ ನಿರುದ್ಯೋಗಿಯಾಗಿದ್ದಾರೆ. ಹೀಗಾಗಿ ಮಾಧ್ಯಮ ಹೇಳಿಕೆ ನೀಡುತ್ತಾ, ಕಾಲ ತಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.



