ದಾವಣಗೆರೆ: ಪ್ರಸ್ತುತ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ ೮೫ ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ೨೦೧೯ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ ೭೨.೯೬ ರಷ್ಟು ಮತದಾನವಾಗಿತ್ತು. ಆದರೆ ಅತ್ಯಂತ ಕಡಿಮೆ ಮತದಾನವಾಗಿದ್ದು ದಾವಣಗೆರೆ ಉತ್ತರ ಶೇ ೬೫.೭೧, ದಕ್ಷಿಣ ಶೇ ೬೫.೯೩ ರಷ್ಟು ಮತದಾನವಾಗಿದೆ. ಇದು ಈ ಚುನಾವಣೆಯಲ್ಲಿ ಶೇ ೮೫ ಕ್ಕಿಂತಲೂ ಹೆಚ್ಚು ಮತದಾನವಾಗ ಬೇಕೆಂಬುದು ಕ್ಷೇತ್ರದ ಗುರಿಯಾಗಿದೆ ಎಂದರು. ದಾವಣಗೆರೆ ಉತ್ತರದಲ್ಲಿ ೨೪೫ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ೨೧೭ ಮತಗಟ್ಟೆಗಳಿವೆ. ೨೦೧೯ ರ ಚುನಾವಣೆಯ ಸರಾಸರಿ ಮತದಾನಕ್ಕಿಂತಲೂ ಶೇ ೨೦ ರಷ್ಟು ಕಡಿಮೆ ೯ ಮತಗಟ್ಟೆ, ಶೇ ೧೫ ರಷ್ಟು ಕಡಿಮೆ ೪೦ ಮತಗಟ್ಟೆ, ಶೇ ೧೦ ರಷ್ಟು ಕಡಿಮೆ ೧೩೫ ಮತಗಟ್ಟೆಗಳಲ್ಲಿ ಮತದಾನವಾಗಿದೆ. ಇವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗಿಂತ ಕಡಿಮೆ ಮತದಾನವಾದ ಕ್ಷೇತ್ರಗಳಾಗಿವೆ.

ಈ ಕ್ಷೇತ್ರಗಳಲ್ಲಿ ೨೦೨೪ ರ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಿದಲ್ಲಿ ಶೇ ೮೫ ಕ್ಕಿಂತ ಹೆಚ್ಚು ಮತದಾನವಾಗಲು ಸಾಧ್ಯವಿದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಚುನಾವಣೆ ನಡೆಯುವ ಮೇ ೭ ರಂದುತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಲು ತಿಳಿಸುವ ಕೆಲಸವನ್ನು ಮತಗಟ್ಟೆ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.
ಶೇ ೧೦ ರಿಂದ ೩೦ ರಷ್ಟು ಮತದಾರರ ಸಂಪರ್ಕವಿಲ್ಲ; ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ಮಾಡಲಾದ ೨೨ ಮತಗಟ್ಟೆಗಳು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ ೨೧ ಮತಗಟ್ಟೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ಶೇ ೧೦ ರಿಂದ ೩೦ ರಷ್ಟು ಮತದಾರರ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಅಂಕಿ ಅಂಶದೊಂದಿಗೆ ತಿಳಿಸಿದರು. ಕೆಲವು ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕರಾರುವಕ್ಕಾಗಿ ಸಮೀಕ್ಷೆ ನಡೆಸಿ ಬೇರೆ ಕಡೆ ವರ್ಗಾವಣೆ, ಮರಣ ಹೊಂದಿದವರ ವಿವರ ಸಂಗ್ರಹಿಸಿರುವರು ಎಂಬ ಮಾಹಿತಿ ನೀಡಿದರು.