ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಈ ವಿಷಯ ಕುರಿತು ಚರ್ಚಿಸಲು ಇದೇ 22ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಂದು ಸಂಜೆ 4 ಗಂಟೆಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯ ವಿರುದ್ಧ ಕಾನೂನು ಸಮರದ ಜೊತೆ ರಾಜಕೀಯ ಹೋರಾಟಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟವನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎಂಬ ಬಗ್ಗೆ ಶಾಸಕರ ಅಭಿಪ್ರಾಯ ಆಲಿಸಲು ಮತ್ತು ಈ ಬಗ್ಗೆ ಚರ್ಚೆ ನಡೆಸಲು ಸಭೆ ಆಯೋಜಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸೋಮವಾರವೇ (ಆಗಸ್ಟ್ 19) ಹೈಕೋರ್ಟ್ ಮೆಟ್ಟಿಲೇರಲು ಚರ್ಚೆ ನಡೆದಿದೆ. ಎಐಸಿಸಿ ಕಾನೂನು ಘಟಕದ ಅಧ್ಯಕ್ಷ ಅಭಿಷೇಕ್ ಮನು ಸಿಂಘ್ವಿ ಅವರ ಜೊತೆ ಈಗಾಗಲೇ ರಾಜ್ಯ ನಾಯಕರು ಮತ್ತು ವರಿಷ್ಢರು ಚರ್ಚೆ ನಡೆಸಿದ್ದಾರೆ. ಎಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಕರಣಗಳಲ್ಲಿ ತನಿಖಾ ವರದಿಯ ಸಹಿತ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತವು ಈ ಹಿಂದೆಯೇ ಮನವಿ ಸಲ್ಲಿಸಿದ್ದರೂ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ಸಿದ್ದರಾಮಯ್ಯ ವಿಚಾರದಲ್ಲಿ ಯಾವುದೇ ತನಿಖೆ ನಡೆಯದಿದ್ದರೂ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ತಾರತಮ್ಯ ನೀತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಅಲ್ಲದೇ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಈ ಶಾಸಕಾಂಗ ಸಭೆ (ಸಿಎಲ್ಪಿ) ಕರೆದಿರುವುದು ಮಹತ್ವ ಪಡೆದುಕೊಂಡಿದೆ.
ರಾಜ್ಯಪಾಲರು ಆದೇಶಿಸಿರೋ ಇದೊಂದು ಪ್ರಾಸಿಕ್ಯೂಷನ್, ನೇರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವೆ ಮತ್ತೊಂದು ಹೋರಾಟಕ್ಕೆ ಕಾರಣವಾಗಿದೆ. ಯಾಕಂದ್ರೆ ಇನ್ಮೇಲೆ ನಡೆಯೋ ರಾಜಕೀಯ ವಾಗ್ಯುದ್ಧ ಎರಡು ರೀತಿಯಾಗಿ ಬದಲಾಗುತ್ತಿದೆ. ಒಂದು ಕಾನೂನು ಹೋರಾಟ. ಮತ್ತೊಂದು ರಾಜಕೀಯ ಹೋರಾಟ. ಈ ಎರಡೂ ಹೋರಾಟಗಳು ಬೇರೇ ನಡೆದರೂ, ರಾಜ್ಯದ ರಾಜಕೀಯ ಧಗಧಗಿಸುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ದ ಆದೇಶಿಸಿರುವ ಪ್ರಾಸಿಕ್ಯೂಷನ್.