ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಸಮರ ಜೋರಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಬೆನ್ನಲ್ಲೆ ಬ್ರೇಕ್ ಫಾಸ್ಟ್ ಮೀಟಿಂಗ್ಗಳು ಕೂಡ ಭಾರೀ ಸದ್ದು ಮಾಡಿದ್ದು, ಈ ನಡುವೆ ಸಿಎಂ ಸಿದ್ದರಾಮಯ್ಯ ವೈರಾಗ್ಯದ ಮಾತುಗಳನ್ನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ ಕೂಡ ಅವರು ಮಾತನಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜಕೀಯ ಶಾಶ್ವತ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ವೈರಾಗ್ಯದ ಮಾತು ಇದೀಗ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದ್ದು, ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದೇವೆ, ಒಂದೇ ದಾರಿಯಲ್ಲಿದ್ದೇವೆ. ಸಿಎಂ ಮಾತು ಸರಿಯಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಡಲೇಬೇಕು ಅಂದ್ರೆ ಬಿಡಲೇಬೇಕು, ಅದು ಯಾವ ಸ್ಥಾನ ಆದರೂ ಆಗಿರಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಯಾವಾಗಲಾದರೂ ಒಂದು ದಿನ ಅಧಿಕಾರ ಬಿಡಲೇಬೇಕು. ಹತ್ತು ಸಾರಿ ಸಿಎಂ ಆದರೂ ಒಂದು ದಿನ ಬಿಡಲೇಬೇಕಲ್ಲ. ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದು ಪಕ್ಕಾ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಹಾಗೂ ವರಿಷ್ಠರಿಗೆ ಈ ವಿಚಾರ ಗೊತ್ತಿದೆ. ಯಾವ ರೀತಿಯಲ್ಲಿ ಹೈಕಮಾಂಡ್ ಬಗೆಹರಿಸುತ್ತದೆ ಎಂಬುದನ್ನು ನೋಡೋಣ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಲಿ ಎಂದು ಕಾರ್ಯಕರ್ತರು ಬಯಸುತ್ತಾರೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಸಿಎಂ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಬಗ್ಗೆ ಕೇಳಿದಾಗ, ನಾವೆಲ್ಲ ಜೊತೆಗೆ ಇದ್ದೇವೆ ಎಂದಿದ್ದಾರೆ. ಜೊತೆಗೆ ದಲಿತ ಸಿಎಂ ವಿಚಾರದ ಬಗ್ಗೆ ಪ್ರಶ್ನೆ ಬಂದಾಗ ಅದನ್ನು ತಡೆದು, ಈ ಅವಧಿಯಲ್ಲಿ ಆ ಬಗ್ಗೆ ಚರ್ಚೆ ಇಲ್ಲ. ಪರಮೇಶ್ವರ್ ಒಬ್ಬ ಸೀನಿಯರ್ ಇದ್ದಾರೆ. ಸಿಎಂ ಬಗ್ಗೆ ಎಲ್ಲ ಮುಗಿದಿದೆ, ಈಗ ಮತ್ತೆ ಶುರು ಮಾಡುವುದು ಬೇಡ. ನಿನ್ನೆ ಎಲ್ಲ ಮುಗಿದಿದೆ, ಪದೇ ಪದೇ ಆ ವಿಚಾರ ಮಾತನಾಡುವುದು ಬೇಡ” ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ನೂ ಸಚಿವ ಸಂಪುಟ ಪುನರ್‌ರಚನೆ ಬಗ್ಗೆಯೂ ಗೊತ್ತಿಲ್ಲ ಎಂದು ಒಂದೇ ಪದದಲ್ಲಿ ಉತ್ತರಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಯು ಸಿಎಂ ಸಿದ್ದರಾಮಯ್ಯ ಅವರ ವೈರಾಗ್ಯಕ್ಕೆ ಪಕ್ಷದೊಳಗಿನಿಂದಲೇ ಬೆಂಬಲ ಇದೆ ಎಂಬ ಸಂದೇಶವನ್ನು ನೀಡಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಇನ್ನೂ ಬಂದಿಲ್ಲ, ಆದರೆ ‘ಒಂದೇ ಪಕ್ಷ, ಒಂದೇ ದಾರಿ’ ಎಂಬ ಸತೀಶ್ ಅವರ ಮಾತು ಒಳಗಿನ ಒಡೆದಾಟಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ ಎನ್ನಲಾಗುತ್ತಿದೆ. ಆದರೆ ಅಧಿಕಾರ ಬಿಡುವುದು ಪಕ್ಕಾ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯು ಪಕ್ಷದೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.



