ದಾವಣಗೆರೆ: ಮೈಸೂರಿನಲ್ಲಿ ನಡೆದ ದಸರಾ ಸಿ.ಎಂ ಕಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ 45 ಕ್ರೀಡಾಪಟುಗಳು ಭಾಗವಹಿಸಿದ್ದು, 35 ಜನ ಚಿನ್ನದ ಪದಕ ವಿಜೇತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಇತ್ತೀಚಿಗೆ ಮೈಸೂರಿನಲ್ಲಿ ನಡೆದ ದಸರಾ ಸಿ.ಎಂ ಕಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಏಕಾಗ್ರತೆ, ಪ್ರಯತ್ನ ಹಾಗೂ ಬುದ್ಧಿವಂತಿಕೆಯನ್ನು ತೋರ್ಪಡಿಸುವ ಮೂಲಕ ಜಿಲ್ಲೆಯ ಹೆಮ್ಮೆಗೆ ಪಾತ್ರರಾಗಿದ್ದಾರೆ. ಇದೇ ರೀತಿ ನಿರಂತರವಾಗಿ ಸಾಧನೆ ಮುಂದುವರಿಸಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ.
ಕುಸ್ತಿಪಟುಗಳು ಪಂಜಾಬ್, ಹರಿಯಾಣ ಹಾಗೂ ಈಶಾನ್ಯ ರಾಜ್ಯಗಳಿಂದ ಹೆಚ್ಚಾಗಿ ಭಾಗವಹಿಸುತ್ತಿದ್ದು, ದಾವಣಗೆರೆ ಜಿಲ್ಲೆಯು ಕೂಡ ಕುಸ್ತಿಯಲ್ಲಿ ಅಪ್ರತಿಮ ಸಾಧನೆ ಮಾಡಿದೆ. ಸಾಧನೆಗಳಿಗೆ ಅತ್ಯುತ್ತಮ ವೇದಿಕೆ ಹಾಗೂ ಮಾರ್ಗದರ್ಶನ ಪ್ರಮುಖವಾಗಿರುತ್ತದೆ. ಸಾಧನೆಯ ಹಂಬಲ ಕ್ರೀಡಾಪಟುಗಳಲ್ಲಿ ಹೆಚ್ಚಾಗಿರಬೇಕು ಎಂದರು. ಇದೇ ಸಂದರ್ಭದಲ್ಲಿ ದಸರಾ ಕಿಶೋರ್ ಪ್ರಶಸ್ತಿಗೆ ಪಾತ್ರರಾದ ಸಂಜೀವ್ ಹರಪನಹಳ್ಳಿಯವರಿಗೆ ಬೆಳ್ಳಿ ಗದೆ ನೀಡುವ ಮೂಲಕ ಅಭಿನಂದಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಕೆ.ಆರ್, ಕುಸ್ತಿ ತರಬೇತುದಾರ ವಿನೋದ್ ಕುಮಾರ್ ಕೆ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.