Saturday, April 19, 2025
Google search engine

Homeರಾಜ್ಯನಾಗಮಂಗಲ ಗಲಭೆಗೆ ಪೊಲೀಸರ ಸಂಪೂರ್ಣ ವೈಫಲ್ಯವೇ ಕಾರಣ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ನಾಗಮಂಗಲ ಗಲಭೆಗೆ ಪೊಲೀಸರ ಸಂಪೂರ್ಣ ವೈಫಲ್ಯವೇ ಕಾರಣ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ಬೆಂಗಳೂರು: ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸತ್ಯಶೋಧನಾ ಸಮಿತಿಯ ನೇತೃತ್ವ ವಹಿಸಿದ್ದ ಅವರು ತಮ್ಮ ಸಮಿತಿಯ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರರಿಗೆ ಹಸ್ತಾಂತರ ಮಾಡಿದರು.

ಬಿ.ವೈ.ವಿಜಯೇಂದ್ರ, ಸತ್ಯಶೋಧನಾ ಸಮಿತಿಯಲ್ಲಿದ್ದ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪಕ್ಷದ ಮುಖಂಡ ಭಾಸ್ಕರ್ ರಾವ್ ಅವರ ಉಪಸ್ಥಿತಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಮತಕ್ಕಾಗಿ ಆಪಾದಿತರ ಕೇಸುಗಳನ್ನು ಹಿಂಪಡೆಯಲಾಗಿದೆ. ಪೊಲೀಸರ ಸಂಪೂರ್ಣ ವೈಫಲ್ಯತೆ ಕಾಣುತ್ತದೆ. ಪೊಲೀಸರ ಕೈಕಟ್ಟಿ ಹಾಕಿದ್ದರು. ಏನೂ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಯಾರ ಮೇಲೂ ಕೇಸ್ ಮಾಡುವ ಹಾಗಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಸ್ಥಿತಿ ಪೊಲೀಸರದಾಗಿತ್ತು ಎಂದು ವಿವರಿಸಿದರು.

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆರೋಪಿಗಳು ಮಾಸ್ಕ್ ಧರಿಸಿದ್ದು ನೋಡಿದರೆ, ಪೆಟ್ರೋಲ್ ಬಾಂಬ್ ಸಿದ್ಧವಿಟ್ಟಿದ್ದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರನೇ ಬಾರಿ ಬಂದು ಬೆಂಕಿ ಹಚ್ಚಿದ್ದಾರೆ ಎಂದು ಆಕ್ಷೇಪಿಸಿದರು.

ಕೇರಳ ಮೂಲದ ವ್ಯಕ್ತಿಗಳು ಭಾಗಿಯಾದ ಕುರಿತು ಗೃಹ ಸಚಿವರೂ ಹೇಳಿದ್ದಾರೆ. ಬಾಂಗ್ಲಾ ದೇಶೀಯರು ಇರುವ ಬಗ್ಗೆ ಅವರೇ ತಿಳಿಸಿದ್ದಾರೆ. ೮೦೦ ಎಕರೆ ಹೊಂದಿದ ಪ್ರಬಲ ವ್ಯಕ್ತಿಯ ಜಾಗದಲ್ಲಿ ಬಾಂಗ್ಲಾ ದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದರಲ್ಲದೆ, ನಿಷೇಧಿತ ಪಿಎಫ್‌ಐ ಚಟುವಟಿಕೆ ಮಾಡಲು ಹೇಗೆ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಪೊಲೀಸ್ ವೈಫಲ್ಯ ಎದ್ದು ಕಾಣುವಂತಿದೆ ಎಂದು ನುಡಿದರು.

ನಮ್ಮ ಆಡಳಿತಾವಧಿಯಲ್ಲಿ ಎಲ್ಲಿಯೂ ಗಣೇಶೋತ್ಸವ ಸಂದರ್ಭದಲ್ಲಿ ಗಲಾಟೆಗಳು ಆಗಿರಲಿಲ್ಲ. ಇವತ್ತು ರಾಜ್ಯದ ೮-೧೦ ಕಡೆ ಗಲಭೆಗಳು ಆಗಿವೆ. ವಿನಾ ಕಾರಣ ಪ್ರಚೋದನೆ ನಡೆದಿದೆ. ಅವರ ಚುನಾಯಿತ ಪ್ರತಿನಿಧಿಗಳು ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುತ್ತೇವೆ; ಗವರ್ನರ್ ಕಚೇರಿಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮೋದಿಜೀ ಅವರನ್ನು ಶೇಖ್ ಹಸೀನ್ ಥರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ರೀತಿ ಬಹಿರಂಗ ಹೇಳಿಕೆ ಕೊಟ್ಟರೂ ಒಂದೇ ಒಂದು ಕೇಸು ದಾಖಲಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆದಿದೆ. ಇವರ ಕಣ್ಮುಂದೆಯೇ ಎಲ್ಲ ರೀತಿಯ ಅನೈತಿಕ ಚಟುವಟಿಕೆ, ಕಾನೂನು ದುರ್ಬಳಕೆ ಆದರೂ ಕೈಕಟ್ಟಿ ಇರುತ್ತಾರೆ. ಪೊಲೀಸ್ ಇಲಾಖೆಯ ೮ ಸಿಬ್ಬಂದಿಗಳ ಮೇಲೆ ಹಲ್ಲೆ ಆಗಿದೆ. ಗಾಯವಾಗಿದ್ದರೂ ಮೆಡಿಕೊ ಲೀಗಲ್ ಕೇಸ್ (ಎಂಎಲ್‌ಸಿ) ಆಗಿಲ್ಲ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಟೀಕಿಸಿದರು. ಮುಗ್ಧ ಜನರ ಮೇಲೆ ಕೇಸು ಹಾಕಿದ್ದಾರೆ ಎಂದು ಆರೋಪಿಸಿದರು. ಪಕ್ಷದ ಮಂಡ್ಯ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

RELATED ARTICLES
- Advertisment -
Google search engine

Most Popular