ಚಾಮರಾಜನಗರ: ದಾಸೋಹದ ಪರಿಕಲ್ಪನೆ ಭಾರತದ ಸಂಸ್ಕೃತಿ ಪರಂಪರೆಯ ವಿಶೇಷ ಗುಣ. ಮಾನವೀಯ ಮೌಲ್ಯದ ಶ್ರೇಷ್ಠತೆಯ ಸಂಕೇತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ,ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದಾಸೋಹ ದಿನ ಹಾಗೂ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಸುಧೀರ್ಘ ಜೀವನ ,ಬದುಕು ಅವರ ಮೌಲ್ಯಗಳು ವಿಶ್ವದ ಮಾನವೀಯ ಜನಾಂಗಕ್ಕೆ ಸದಾ ಕಾಲ ಮಾದರಿ ಹಾಗೂ ಸ್ಪೂರ್ತಿ ಆಗಿದೆ. ಸ್ವಾಮೀಜಿಯವರ ಶೈಕ್ಷಣಿಕ, ಆಧ್ಯಾತ್ಮಿಕ ,ಸಾಮಾಜಿಕ ಸಾಂಸ್ಕೃತಿಕ ಮತ್ತು ವಿಚಾರಪೂರಿತ ಚಿಂತನೆಗಳು ಕೋಟಿ ಕೋಟಿ ಭಾರತೀಯರಿಗೆ ಸದಾ ಕಾಲ ಮಾರ್ಗದರ್ಶನವನ್ನು ನೀಡಿದೆ. ಮನುಷ್ಯ ಹೇಗೆ ಬದುಕಬೇಕು ಸಮಾಜಕ್ಕೆ ಸ್ಪಂದಿಸುವ ಗುಣ ಮತ್ತು ಹಸಿದ ಜೀವಿಗಳಿಗೆ ಆಹಾರ ನೀಡಿ ಎಲ್ಲ ಕ್ಷೇತ್ರಗಳಲ್ಲೂ ಮಾನವನ ಬದುಕು ಹಸನಾಗಿ ಸಮಾಜಕ್ಕೆ ಆತ ಉತ್ತಮ ಮೌಲ್ಯಗಳ ಸದ್ಗುಣವಂತನಾಗಿ ಬೆಳೆಯಲು ಅವಕಾಶ ನೀಡಿ ಜೀವಂತಿಕೆಯನ್ನು ತಂದುಕೊಟ್ಟ ಮಹಾ ಗುರುಗಳು. ದಾಸೋಹ ದಿನದಂದು ಅವರ ಸ್ಮರಣೆ ಆಗುತ್ತಿರುವುದು ಹೆಮ್ಮೆಯ ವಿಷಯ.
ವಿಶ್ವಕ್ಕೆ ಭಾರತೀಯ ಮಹಾನ್ ದಾರ್ಶನಿಕರು, ಚಿಂತಕರು, ಯೋಗಿಗಳು ,ಋಷಿ ಪರಂಪರೆಯ ಸಾತ್ವಿಕ ಮನಸ್ಥಿತಿಯ ಗುರುಗಳ ಬಹುದೊಡ್ಡ ಪರಂಪರೆ ಇದೆ .ಅವರೆಲ್ಲರ ಮಾರ್ಗದರ್ಶನವೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ .ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿ ,ಆಧ್ಯಾತ್ಮಿಕ ಮೌಲ್ಯಗಳನ್ನು ಸದೃಢವಾಗಿ ಸಮಾಜಕ್ಕೆ ಅರ್ಪಿಸಿದ ಮಹಾಯೋಗಿ ಎಂದು ತಿಳಿಸಿ ಅವರ ಕಾಲಘಟ್ಟದಲ್ಲಿ ನಾವೆಲ್ಲರೂ ಅವರ ಆಶೀರ್ವಾದ ಪಡೆದಿರುವುದೇ ನಮ್ಮ ಸಂತೋಷಕ್ಕೆ ಕಾರಣವಾಗಿದೆ ಎಂದು ತಿಳಿಸಿದರು .ಕನ್ನಡ ಸಾಹಿತ್ಯ ಪರಿಷತ್ತು ಅವರ ಕೊಡುಗೆಗಳನ್ನು ಸದಾ ಕಾಲ ಸ್ಮರಿಸುವ ಮೂಲಕ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ಮಾತನಾಡಿ ಸಿದ್ದಗಂಗಾ ಮಠದ ಸ್ವಾಮೀಜಿಯವರು ಚಾಮರಾಜನಗರಕ್ಕೆ ಹಲವಾರು ಭಾರಿ ಭೇಟಿ ನೀಡಿ ಶಿಷ್ಯ ಪರಂಪರೆಯನ್ನು ಆಶೀರ್ವದಿಸಿರುವುದು ನಮ್ಮೆಲ್ಲರ ಪುಣ್ಯ. ಅವರ ದಾಸೋಹ ಮರೆಯಲಾಗದು .ಅವರನ್ನು ಸ್ಮರಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದೆ ಎಂದು ತಿಳಿಸಿದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಸಿದ್ದಗಂಗಾ ಶ್ರೀಗಳು ಹಲವು ದೃಢ ನಿರ್ಧಾರದ ಮೂಲಕ ಶ್ರೀಮಠವನ್ನು ಬೆಳೆಸಿ, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದವರು. ವ್ಯಕ್ತಿಯ ವ್ಯಕ್ತಿತ್ವ , ಜೀವನದ ಹಾದಿ ಪ್ರತಿಯೊಬ್ಬರಲ್ಲಿಯೂ ಪ್ರೇರಣೆಯನ್ನು ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಸರಸ್ವತಿ, ರವಿಚಂದ್ರ ಪ್ರಸಾದ್ , ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಲೋಕೇಶ್, ಕಾರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.