ಕಲಬುರಗಿ : ರಾಜ್ಯದಲ್ಲಿ ನಾಯಕತ್ವ ಗೊಂದಲ ಕಾಂಗ್ರೆಸ್ ಹೈಕಮಾಂಡ್ ಸೃಷ್ಟಿ ಮಾಡಿಲ್ಲ, ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ಹೈಕಮಾಂಡ್ ಅಂದರೆ ಹೇಗೆ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇನ್ನೂ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ- ಡಿಸಿಎಂ ಬಣದ ಶಾಸಕರು, ಸಚಿವರು ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಕುರ್ಚಿ ಕದನವನ್ನು ಜೀವಂತವಾಗಿಟ್ಟಿದ್ದಾರೆ. ನಾನೇ 5 ವರ್ಷ ಸಿಎಂ, ಎರಡೂವರೆ ವರ್ಷಕ್ಕೆ ನಾಯಕತ್ವ ಬದಲಾಗುತ್ತೆ ಅಂತ ಎಲ್ಲೂ ಒಪ್ಪಂದ ಆಗಿಲ್ಲ. ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ ಸೆಷನ್‌ನಲ್ಲಿ ಹೇಳಿಕೆ ಕೊಟ್ಟಿದ್ದರು. ನಂತರ, ನನಗೂ ಸಿಎಂಗೂ ಒಪ್ಪಂದವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದರ ಬೆನ್ನಲ್ಲೇ ಸಿಎಂ ಆಪ್ತರ ಭೇಟಿಗೆ ಡಿಕೆಶಿ ಮುಂದಾಗಿದ್ದಾರೆ. ಈ ನಡುವೆ ಸ್ಥಳೀಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಕ್ಷ್ಮ ಸಂದೇಶ ಕೊಟ್ಟಿದ್ದು, ಜೊತೆಗೆ ಇಲ್ಲಿನ ಸಮಸ್ಯೆಯನ್ನು ಇಲ್ಲೇ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರ ಕುರಿತು ಮಾತನಾಡಿದ ಅವರು, ಈ ಗೊಂದಲವನ್ನು ಹೈಕಮಾಂಡ್ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ಅಂತ ಹೇಳಿದರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು, ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳೆದಿದ್ದಲ್ಲ. ಹಾಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಈ ವೇಳೆ ಮಾರ್ಮಿಕವಾಗಿ ನುಡಿದಿದ್ದಾರೆ.



