ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ರಾಜಭವನ ಚಲೋ ಅಲ್ಲ; ಮುಡಾ ಚಲೋ ನಡೆಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.
ಹಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಲಿ ಎಂದು ಸಲಹೆ ನೀಡಿದರು.
ಮೂಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಮುಡಾಕ್ಕೆ ಕೈ ಮುಗಿದು ಕ್ಷಮೆ ಕೇಳಿ ಬರಲಿ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೇಕೆ ಹೆದರುತ್ತಾರೆ? ಅರ್ಥವಾಗುತ್ತಿಲ್ಲ ಎಂದು ಜೋಶಿ ಶಂಕೆ ವ್ಯಕ್ತಪಡಿಸಿದರು.
ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಬಿಎಸ್ ವೈ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದ್ದರಾ ಎಂದು ಜೋಶಿ ಪ್ರಶ್ನಿಸಿದರು
ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಎಸ್ ವೈ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರುಸಲಿ ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜಭವನ ಚಲೋ ಮೂಲಕ ರಾಜ್ಯಪಾಲರನ್ನು ಬೆದರಿಸುವ, ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ ಎಂದ ಮೇಲೆ ರಾಜ್ಯಪಾಲರನ್ನು ಬೆದರಿಸುವಂತಹ ರಾಜಭವನ ಚಲೋದಂತಹ ಡ್ರಾಮಾ ಏಕೆ? ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಿಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ಅದೇ ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಈಗ ತನಿಖೆಗೆ ಅನುಮತಿ ನೀಡಿದರೆಂದು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂದು ಸಿಎಂ, ಡಿಸಿಎಂ ವಿರುದ್ಧ ಜೋಶಿ ಹರಿಹಾಯ್ದರು.