ಬೆಂಗಳೂರು: ಬಾಕಿ ಉಳಿದಿರುವ ಕಾಮಗಾರಿ ಬಿಲ್‍ನ್ನು ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಗುತ್ತಿಗೆದಾರರಿಗೆ ಬರಬೇಕಾಗಿರುವ ನೂರಾರು ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗಲೂ ತ್ವರಿತವಾಗಿ ಬಿಲ್ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೆವು. ಅದರಂತೆ ಜೂ.28ರಂದು ಸರ್ಕಾರ ಸುತ್ತೋಲೆ ಹೊರಡಿಸಿತು. ಆದರೆ ಈ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಹಣ ಬಿಡುಗಡೆ ಮಾಡುತ್ತಿಲ್ಲ.
ಕಳೆದ ಒಂದೂವರೆ ತಿಂಗಳಿನಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಯಾಗಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕಣ್ಣೋರೆಸುವ ತಂತ್ರ ಬಿಟ್ಟು ಕೂಡಲೇ ಸ್ಪಂದಿಸಬೇಕು ಎಂದು ಕೆಂಪಣ್ಣ ಒತ್ತಾಯಿಸಿದ್ದಾರೆ. ಒಂದು ವೇಳೆ ಜು.15ರೊಳಗೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ಗಡುವು ನೀಡಿದ್ದಾರೆ.
ಬಿಲ್‍ಗಳ ನೈಜತೆಯನ್ನು ಪರಿಶೀಲಿಸಿ ನಿಯಮಾನುಸಾರವೇ ಹಣ ಬಿಡುಗಡೆ ಮಾಡುವಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಗುತ್ತಿಗೆದಾರರಿಗೆ ನ್ಯಾಯಸಮ್ಮತವಾಗಿ ಸಲ್ಲಬೇಕಿದ್ದ ಹಣ ನೀಡಲು ಸತಾಯಿಸುತ್ತಿರುವುದು ಜನಪರ ಕಾಳಜಿಯುಳ್ಳ ಸರ್ಕಾರದ ಲಕ್ಷಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.