Saturday, April 19, 2025
Google search engine

Homeಸ್ಥಳೀಯನೀರಿನ ದರ ಹೆಚ್ಚಳ ನಿರ್ಧಾರ ಹಿಂಪಡೆದ ಪಾಲಿಕೆ

ನೀರಿನ ದರ ಹೆಚ್ಚಳ ನಿರ್ಧಾರ ಹಿಂಪಡೆದ ಪಾಲಿಕೆ


ಮೈಸೂರು: ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಿನ ದರ ಹೆಚ್ಚಳ ಪ್ರಸ್ತಾಪವನ್ನು ಮಹಾನಗರ ಪಾಲಿಕೆ ಹಿಂಪಡೆಯುವ ಜತೆಗೆ, ನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಮತ್ತು ಬಳಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಬಾರೀ ವ್ಯತ್ಯಾಸವಿದ್ದು, ನೀರು ಪೂರೈಕೆಯಲ್ಲಿನ ಲೋಪ ದೋಷ ಮತ್ತು ಸಮಸ್ಯೆಗಳ ನಿವಾರಣೆಗೆ ೧೫ ದಿನಗಳಲ್ಲಿ ವಿಶೇಷ ಸಭೆ ನಡೆಸಲು ತೀರ್ಮಾನಿಸಲಾಯಿತು.
ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಕೌನ್ಸಿಲ್ ಸಬೆಯಲ್ಲಿ ಮೇಯರ್ ಶಿವಕುಮಾರ್ ಈ ವಿಷಯ ಪ್ರಕಟಿಸಿದರು. ಕೌನ್ಸಿಲ್ ಸಭೆಯಲ್ಲಿ ನೀರಿನ ದರ ಹೆಚ್ಚಳ ಪ್ರಸ್ತಾಪ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬಿಜೆಪಿ ಸದಸ್ಯರು ಕೂಡ ನೀರಿನ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು. ಅನಧಿಕೃತ ಸಂಪರ್ಕಗಳು ಹೆಚ್ಚಾಗಿದ್ದು, ಬಳಕೆಯಾಗುತ್ತಿರುವ ನೀರಿನ ಪ್ರಮಾಣದ ಮಾಹಿತಿಯೇ ಸಿಗುತ್ತಿಲ್ಲ. ಅಲ್ಲದೇ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಲೆಕ್ಕವೇ ಸಿಗುತ್ತಿಲ್ಲ ಎಂದು ಸದಸ್ಯರಾದ ಅಯೂಬ್ ಖಾನ್, ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಕೂಡ ದನಿಗೂಡಿಸಿದರು.
ಅಂತಿಮವಾಗಿ ಪಕ್ಷಾತೀತವಾಗಿ ಎ ಸದಸ್ಯರು ನೀರಿನ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೌನ್ಸಿಲ್ ಸಬೆಯಲ್ಲಿ ನೀರಿನ ದರ ಹೆಚ್ಚಳ ಪ್ರಸ್ತಾಪವನ್ನು ಮೇಯರ್ ಕೈ ಬಿಟ್ಟರು.
ಮೈಸೂರು ನಗರಕ್ಕೆ ಕಾವೇರಿ ಮತ್ತು ಕಬಿನಿ ಮೂಲದಿಂದ ೩೨೫ ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ನಗರಕ್ಕೆ ೨೪೦ ಎಂಎಲ್‌ಡಿ ನೀರಿಗೆ ಮಾತ್ರ ಲೆಕ್ಕ ಸಿಗುತ್ತಿದೆ. ಆದರೆ ಉಳಿದ ನೀರಿನ ಪ್ರಮಾಣ ಎಲ್ಲಿಗೆ ಹೋಗುತ್ತಿದೆ. ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಇನ್ನು ಎರಡು ವಾರದಲ್ಲಿ ವಿಶೇಷ ಸಭೆ ನಡೆಸಿ ಸೋರಿಕೆ ತಪ್ಪಿಸುವುದರೊಂದಿಗೆ ಅನಧಿಕೃತ ಸಂಪರ್ಕ ಸಕ್ರಮ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಜು.೧೭ರಂದು ನಗರ ಪ್ರದಕ್ಷಿಣೆ: ಸಭೆಯಲ್ಲಿ ಜೆಡಿಎಸ್ ಸದಸ್ಯ ಕೆ.ವಿ.ಶ್ರೀಧರ್ ನಗರದಲ್ಲಿ ಇರುವ ಅನಧಿಕೃತ ಬೀದಿಬದಿ ವ್ಯಾಪಾರದಿಂದ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ ಸಭೆಯಲ್ಲೂ ರಸ್ತೆ ಒತ್ತುವರಿ ತೆರವು ಸಂಬಂಧ ವಿಷಯ ಪ್ರಸ್ತಾಪಿಸಿದಾಗ ೩ ದಿನಗಳಲ್ಲಿ ಸಮಸ್ಯೆ ಸರಿಪಡಿಸುವುದಾಗಿ ಹೇಳಿದ್ದಿರಿ. ಹಾಗಾದರೆ ನಿಮ್ಮ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಸದಸ್ಯ ಅಯೂಬ್ ಖಾನ್, ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಪಾಲಿಕೆಯಿಂದಲೂ ಕಾರ್ಡ್‌ಗಳನ್ನು ವಿತರಿಸಲಾಗಿದೆ. ವ್ಯಾಪಾರಕ್ಕೆ ಪ್ರತ್ಯೇಕ ಜೋನ್ ಗುರುತಿಸಿಕೊಡಬೇಕು ಎಂದರು.
ಈ ವಿಚಾರವಾಗಿ ಮಾತನಾಡಿದ ಮೇಯರ್ ಶಿವಕುಮಾರ್, ನಗರದಲ್ಲಿ ಅನಧಿಕೃತವಾಗಿರುವ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ರಸ್ತೆ ಒತ್ತುವರಿ ತೆರವು ಮಾಡುವ ಸಲುವಾಗಿ ನಾನು, ಉಪ ಮೇಯರ್, ಆಯುಕ್ತರು ಹಾಗೂ ಪಾಲಿಕೆ ಸದಸ್ಯರು ಸೋಮವಾರ ಸಂಜೆ ೪ಕ್ಕೆ ನಗರ ಪ್ರದಕ್ಷಣೆ ಮಾಡುತ್ತೇವೆ. ಈ ವೇಳೆ ಪೊಲೀಸರ ಸಹಕಾರ ಪಡೆದು ಒತ್ತುವರಿ ತೆರವು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೆಇಬಿ ಅಧಿಕಾರಿಗಳ ಸಭೆ: ನಾಲ್ಕು ವರ್ಷಗಳಿಂದ ಕೌನ್ಸಿಲ್ ಸಭೆಗೆ ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆ ತರುತ್ತಿzನೆ. ಇಂದಿನ ಕೌನ್ಸಿಲ್‌ನಲ್ಲಿ ಮೇಯರ್ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ಕೆಲಸವಾಗಿಲ್ಲ ಎಂದು ಸದಸ್ಯ ರಮೇಶ್ ತೀವ್ರ ಬೇಸರ ಹೊರಹಾಕಿದರು. ಇದಕ್ಕೆ ಜೆಡಿಎಸ್ ಸದಸ್ಯರಾದ ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ ದನಿಗೂಡಿಸಿದರು.
ಸೆಸ್ಕ್ ಅಧಿಕಾರಿಗಳು ಕೌನ್ಸಿಲ್‌ಗೆ ಅಗೌರವ ತೋರಬಾರದು. ಸೆಸ್ಕ್-ಪಾಲಿಕೆ ಅಧಿಕಾರಿಗಳ ಸಭೆಯನ್ನು ಬುಧವಾರ ಕರೆಯುತ್ತೇನೆ. ಯುಜಿಡಿ, ವಾಟರ್ ವರ್ಕ್ಸ್‌ಗೆ ತೊಂದರೆಯಾಗುತ್ತಿರುವ ಬಗ್ಗೆ ಸಂಪೂರ್ಣ ಚರ್ಚೆ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ಭರವಸೆ ನೀಡಿದರು.
ನಿಲ್ಲದ ಕೇಬಲ್ ಚರ್ಚೆ: ಗುರುವಾರದ ಕೌನ್ಸಿಲ್ ಸಭೆಯಲ್ಲೂ ಕೇಬಲ್ ಅಳವಡಿಕೆ ವಿಚಾರ ಚರ್ಚೆಗೆ ಬಂತು. ಕೇಬಲ್ ಅಳವಡಿಕೆಗೆ ಕೌನ್ಸಿಲ್‌ನಲ್ಲಿ ಚರ್ಚಿಸಿ ಒಪ್ಪಿಗೆ ಪಡೆದ ನಂತರ ಅನುಮತಿ ಕೊಡಬೇಕು ಎಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ತಿಳಿಸಿದರು.
ಇದಕ್ಕೂ ಮುನ್ನ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು, ೧೦೦ ಕಿಮೀ ಕೇಬಲ್ ಅಳವಡಿಕೆಗೆ ಅನುಮತಿ ಬಂದಿದೆ. ದರ ನಿಗದಿ ಮಾಡಿದ ಬಳಿಕ ಕೌನ್ಸಿಲ್ ತರುವುದಾಗಿ ಪ್ರಕಟಿಸಿದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಯುಕ್ತರ ಅಧಿಕಾರ ಬಳಸಿ ಅನುಮತಿ ನೀಡಲಾಗಿದೆ ಎಂದು ಆಯುಕ್ತರು ಪ್ರತ್ಯುತ್ತರ ನೀಡಿದರು.
ಕೇಬಲ್ ಅಳವಡಿಕೆಯಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ೧೦೦ ಕಿಮೀ ಅನುಮತಿ ಪಡೆದು ೫೦೦ ಕಿಮೀ ಕೇಬಲ್ ಅಳವಡಿಸುತ್ತಾರೆ. ಇದರಿಂದ ಪಾಲಿಕೆಗೆ ಆದಾಯ ನಷ್ಟವಾಗುತ್ತಿದೆ ಎಂದು ಎಲ್ಲ ಸದಸ್ಯರು ದನಿಗೂಡಿಸಿದರು. ಕೌನ್ಸಿಲ್‌ನಲ್ಲಿ ಚರ್ಚಿಸಿ ಅನುಮತಿ ಪಡೆಯಬೇಕೆಂಬ ನಿರ್ಣಯದೊಂದಿಗೆ ಚರ್ಚೆ ಅಂತ್ಯಗೊಂಡಿತು.
ಸಭೆಯಲ್ಲಿ ಉಪ ಮೇಯರ್ ಡಾ.ಜಿ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಇದ್ದರು.

ಪೇ ಅಂಡ್ ಪಾರ್ಕ್‌ಗೆ ಶೀಘ್ರವೇ ಟೆಂಡರ್: ಕೆ.ವಿ.ಶ್ರೀಧರ್ ಮಾತನಾಡಿ, ಕಳೆದ ಕೌನ್ಸಿಲ್‌ನಲ್ಲಿ ನಗರದ ಅಶೋಕ ರಸ್ತೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಪುರಭವನ, ಧನ್ವಂತರಿ ರಸ್ತೆಯಲ್ಲಿ ವಾಹನ ನಿಲುಗಡೆ ಕ್ರಮಬದ್ಧಗೊಳಿಸಲು ಪೇ ಅಂಡ್ ಪಾರ್ಕ್ ಪದ್ಧತಿ ಜಾರಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಪರಿಶೀಲಿಸುವುದಾಗಿ ಹೇಳಿದ್ದಿರಿ. ಈಗ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೇಯರ್ ನಗರದಲ್ಲಿ ಪೇ ಅಂಡ್ ಪಾರ್ಕ್ ಅನುಷ್ಠಾನ ಮಾಡುವುದು ಖಚಿತ. ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.

RELATED ARTICLES
- Advertisment -
Google search engine

Most Popular