ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿ ರಾಹುಲ್ ತೋನ್ಸೆಗೆ ಬೆಂಗಳೂರಿನ ನ್ಯಾಯಾಲಯ 61.50 ಲಕ್ಷ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಂಜನಾ ಗಲ್ರಾನಿ ಅವರ ಸ್ನೇಹಿತ ಬನಶಂಕರಿ ೩ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್ ಅವರು 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂ.ವನ್ನು ದೂರುದಾರೆ ನಟಿ ಸಂಜನಾಗೆ ನೀಡಬೇಕು.
ನಿಗದಿತ ಸಮಯದೊಳಗೆ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದಲ್ಲಿ 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶ ಪ್ರಕಟಿಸಲಾಗಿದೆ.