ಶಿರಸಿ(ಉತ್ತರ ಕನ್ನಡ): ಹಣದ ಆಸೆಗಾಗಿ ಕೆಲಸ ನೀಡಿದ ಮಾಲೀಕನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಶಿರಸಿಯ ಬನವಾಸಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ೪೮ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವ ಶಿರಸಿಯ ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಪತ್ತೆಯಾಗಿತ್ತು. ಕೊಲೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ನಂತರ ತನಿಖೆ ಕೈಗೊಂಡ ಬನವಾಸಿ ಠಾಣೆ ಪೊಲೀಸರು ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿ, ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿಯ ಅಶೋಕ ಗಿರಿಯಪ್ಪ ಉಪ್ಪಾರ (೪೮) ಕೊಲೆಯಾದ ವ್ಯಕ್ತಿ. ಈತನ ಬಳಿಯೇ ಕೆಲಸ ಮಾಡಿಕೊಂಡಿದ್ದ ಕಿರಣ ಪರಶುರಾಮ ಸುರಳೇಶ್ವರ, ನಿರಂಜನ ಗೊವಿಂದಪ್ಪ ತಳವಾರ ಹಾಗೂ ಗುಡ್ಡಪ್ಪ ಅಲಿಯಾಸ್ ಗುಡ್ಯ ತಿಳುವಳ್ಳಿ ಬಂಧಿತ ಕೊಲೆ ಆರೋಪಿಗಳು. ಎಲ್ಲರೂ ಸಹ ಕೊಲೆಯಾದ ವ್ಯಕ್ತಿಯ ಗ್ರಾಮದವರೇ ಆಗಿದ್ದು, ಕೊಲೆ ರಹಸ್ಯವನ್ನು ಕೇವಲ ಎರಡೇ ದಿನಗಳಲ್ಲಿ ಪೊಲೀಸರು ಭೇದಿಸಿದ್ದಾರೆ.
ಆದರೆ ತಮ್ಮ ಮಾಲೀಕ ಕಾಣೆಯಾದ ಕುರಿತು ಎರಡು ದಿನ ಆದರೂ ಯಾರಿಗೂ ಆರೋಪಿಗಳು ಮಾಹಿತಿ ನೀಡಿರಲಿಲ್ಲ. ಇದಲ್ಲದೇ ಶವ ಸಿಕ್ಕ ಸಮೀಪದಲ್ಲೇ ಆರೋಪಿಗಳ ಮೊಬೈಲ್ ಸಂಖ್ಯೆ ಕೊನೆಯ ಬಾರಿಗೆ ಆಕ್ಟಿವ್ ಆಗಿತ್ತು. ಜೊತೆಗೆ ಮೃತನ ಮಗ ಶವ ಗುರುತಿಸಲು ಬಂದ ಸಂದರ್ಭದಲ್ಲಿ ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿತರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಗಿ ಶಿರಸಿ ಉಪವಿಭಾಗದ ಡಿವೈಎಸ್ ಪಿ ಕೆ ಎಲ್ ಗಣೇಶ್ ತಿಳಿಸಿದ್ದಾರೆ. ಕೊಲೆಗೆ ಬಳಸಿದ ಎರಡು ಕಾರುಗಳನ್ನು, ಕೊಲೆಯಾದ ವ್ಯಕ್ತಿಯ ದ್ವಿಚಕ್ರ ವಾಹನವನ್ನು, ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.