ಮೈಸೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳ ನಡುವೆಯೇ ಸಚಿವ ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ 2028ರವರೆಗೆ ಸಿಎಂ ಆಗಿರುತ್ತಾರೆ. ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ಕೆಲ ದಿನದ ಹಿಂದೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಮೀರ್ ಅವರು ಸಿಎಂ ಸಿದ್ದರಾಮಯ್ಯ ಅವರ ನಂತರ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗೋದನ್ನು ನಾವು ನೋಡ್ಬೇಕು. ಅದೇ ನಮ್ಮ ಆಸೆ ಎಂದಿದ್ದರು. ಸದ್ಯ ಅವರ ಮಾತಿನ ವರಸೆ ಬದಲಿಸಿದ್ದಾರೆ.
ಹೈಕಮಾಂಡ್ ಮಾತ್ರ ಸಿಎಂ ಸ್ಥಾನ ಬದಲಾವಣೆ ಬಗ್ಗೆ ತಿರ್ಮಾನ ಮಾಡಬಹುದು. ಹೈಕಮಾಂಡ್ ಬಿಟ್ಟು ಬೇರೆ ಇನ್ಯಾರ ಕೈಯಲ್ಲೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಅವರು ಸಿಎಂ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಮತ್ತೆ ಮತ್ತೆ ಆ ಮಾತು ಯಾಕೆ? ಇನ್ನು ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸಚಿವ ಜಮೀರ್ ಅವರು ಸ್ಪಷ್ಟಪಡಿಸಿದರು.



