ಹುಣಸೂರು: ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿಯಾಗಿ ಎರಡು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರು ದೇಶದ ಸುಂದರ ಭವಿಷ್ಯ ಯಾವತ್ತೂ ಮಕ್ಕಳ ಕೈನಲ್ಲಿದೆಯೆಂದು ನಂಬಿದ್ದರೆಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ಹುಣಸೂರಿನ ಕರಿಗೌಡರ ಬೀದಿಯ ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಿದ್ದ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶ ಕಂಡ ಪ್ರಗತಿಪರ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಪ್ರೀತಿ ಮತ್ತು ಕಾಳಜಿಯ ದ್ಯೋತಕವಾಗಿ ನವೆಂಬರ್ ೧೪ ನ್ನು ನೆಹರೂ ಜನ್ಮದಿನವನ್ನು ಭಾರತ ಸರ್ಕಾರದ ಘೋಷಣೆಯಂತೆ ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ನೆಹರು ಗೌರವಾರ್ಥ ದೇಶಾದ್ಯಂತ ಆಚರಿಸಲಾಗುತ್ತದೆ ಎಂದರು.
ಮಕ್ಕಳು ಅರಳುವ ಹೂಗಳಿದ್ದಂತೆ.ಈ ಹೂವುಗಳು ಯಾವತ್ತೂ ಬಾಡಬಾರದು. ತಮ್ಮ ಪ್ರತಿಭೆಯಿಂದ ತಮ್ಮ ಭವಿಷ್ಯವನ್ನು ಅರಳಿಸಿಕೊಂಡು ಚಂದದ ಬದುಕನ್ನು ಕಟ್ಟಿಕೊಳ್ಳಬೇಕು. ಮಕ್ಕಳ ಪ್ರಿಯ ನೆಹರು ಅವರು ಹೇಳಿರುವಂತೆ ಮಕ್ಕಳ ಭವಿಷ್ಯದಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಇಂದಿನ ಮಕ್ಕಳೇ ನಾಳಿನ ಸತ್ಪ್ರಜೆಗಳು ಮತ್ತು ಮುಂದಿನ ನಾಯಕರು ಹಾಗೂ ಸಾಧಕರು. ಹಾಗಾಗಿ ಮಕ್ಕಳು ಶಿಕ್ಷಣದ ಮಹತ್ವ ಅರಿತು ಕೊಂಡು ಚೆನ್ನಾಗಿ ಓದಿ ಸಾಧಕರಾಗಬೇಕು.
ಮಕ್ಕಳ ಹಕ್ಕುಗಳ ಅರಿವು, ಮಕ್ಕಳ ಸಂರಕ್ಷಣೆ, ಮಕ್ಕಳ ಆರೋಗ್ಯ, ಆರೈಕೆ, ಕಡ್ಡಾಯ ಶಿಕ್ಷಣ, ಇದೆಲ್ಲವೂ ಇಲ್ಲಿ ಒಳಗೊಂಡಿದ್ದು ಇದರ ಜಾಗೃತಿ ಸಮರ್ಪಕವಾಗಿ ಆಗಬೇಕಿದೆ.ವತಂದೆ, ತಾಯಿ, ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳು ಸೇರಿದಂತೆ ಒಟ್ಟಾರೆ ಇಡೀ ಸಮಾಜ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಪೂರಕವಾಗಿ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ನೆಹರೂ ಕಂಡ ಮಕ್ಕಳ ಭವಿಷ್ಯ ಮತ್ತು ದೇಶದ ಅಭಿವೃದ್ಧಿ ಸಾರ್ಥಕ್ಯಗೊಳ್ಳುತ್ತದೆ ಹಾಗೂ ಮಕ್ಕಳು ದೇಶದ ಸಂಪತ್ತೆಂಬುದು ಅಕ್ಷರಶಃ ನಿಜವಾಗುತ್ತದೆಂದರು. ಈ ದಿಸೆಯಲ್ಲಿ ಮಕ್ಕಳು ಕೂಡ ನೆಹರು ಅವರ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಅವರ ಆಶಯದಂತೆ ನಡೆಯಬೇಕೆಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಕಲಾವಿದೆ, ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಬರೀ ಪಠ್ಯಕ್ಕಷ್ಟೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಬೇಕೆಂದು ಕಿವಿ ಮಾತು ಹೇಳಿ ಶುಭ ಹಾರೈಸಿದರು. ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ ಅರ್ ಪಿ ಸ್ಮಿತಾ ಸಿಂಧ್ಯಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಕೂಡ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬಿಟ್ಟು ಪ್ರತಿಯೊಬ್ಬರೂ ಮೇಲರಿಮೆ ಹೊಂದಬೇಕೆಂದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಿರಣ್ಮಯಿ ಪ್ರತಿ?ನದ ಅಧ್ಯಕ್ಷ ಎ.ಸಂಗಪ್ಪ ಹಾಗು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಬಹುಮಾನ ವಿತರಿಸಿದರು. ಪದವೀಧರ ಮುಖ್ಯ ಶಿಕ್ಷಕ ಜೆ.ಮಧು ಅಧ್ಯಕ್ಷತೆ ವಹಿಸಿ ಹಿತನುಡಿಗಳನ್ನಾಡಿದರು. ಶಿಕ್ಷಕರಾದ ಕೆ.ರೇಣುಕ ಪ್ರಸನ್ನ , ಹೆಚ್.ಎಲ್.ಜಯಕುಮಾರ್, ಹೆಚ್. ಟಿ. ವಸಂತಾ, ಎಂ.ಪಿ. ಮಂಜುಳಾ, ಎಂ.ಚೈತ್ರ , ಎಂ.ಬಿ. ಲತಾ, ಎಲ್. ಶೃತಿ, ಆರ್.ಎಸ್.ಪುಪ್ಪ , ಸುಜಾತಾ, ಎಲಿಜಬೆತ್ ರಾಣಿ, ಪುಪ್ಪಮೇರಿ, ಅಂಗನವಾಡಿ ಶಿಕ್ಷಕಿಯರಾದ ಸಲ್ಮಾ , ಅಸ್ಮಾ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಪೂಜಾ ಪ್ರಾರ್ಥನೆ, ಶಿಕ್ಷಕ ರೇಣುಕ ಪ್ರಸನ್ನ ಸ್ವಾಗತಿಸಿದರು. ಶಿಕ್ಷಕಿ ಸುಜಾತ ನಿರೂಪಿಸಿದರು.