ಮಡಿಕೇರಿ : ನಗರದ ಕೋಟೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜ ಗುರುವಾರ ಪರಿಶೀಲಿಸಿದರು. ಕೋಟೆಯ ನೆಲಮಹಡಿ ಮತ್ತು ಮೊದಲ ಮಹಡಿಯ ಕಾಮಗಾರಿಯನ್ನು ವೀಕ್ಷಿಸಿದರು. ಅಲ್ಲದೆ ಕೋಟೆ ಸುತ್ತ ಮುತ್ತ ಭೇಟಿ ನೀಡಿ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ನಗರದ ಕೋಟೆ ನಗರದ ಹೃದಯ ಭಾಗದಲ್ಲಿದ್ದು, ಜಿಲ್ಲಾ ಕೇಂದ್ರ ಮಡಿಕೇರಿ ಕೋಟೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ನಗರದ ಕೋಟೆ ಅಭಿವೃದ್ಧಿಗೆ ಸರಕಾರ 10.76 ಕೋಟಿ ರೂ.ಬಿಡುಗಡೆ ಮಾಡಿದ್ದು, ಕೋಟೆ ನವೀಕರಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಿದರು. ಪುರಾತತ್ವ ಇಲಾಖೆ ಬಿಪಿನ್ ಚಂದ್ರ ನೇಗಿ ಅವರು ಮೇಲ್ಛಾವಣಿ ಕಾಮಗಾರಿ ನೆರವೇರಿಸಿ ಮಾತನಾಡಿ, ಪ್ಲಾಸ್ಟಿಂಗ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಲೈಮ್ ಪೇಂಟ್ ಕಾಮಗಾರಿ ಜತೆಗೆ ಪೋಲಿಷ್ ಕಾಮಗಾರಿ ಭರದಿಂದ ಸಾಗಿದ್ದು, ಡಿಸೆಂಬರ್ ವೇಳೆಗೆ ಕೋಟೆ ನವೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಪುರಾತತ್ವ ಇಲಾಖೆಯ ಸೋಮಲಾ ನಾಯಕ್, ಸುನೀಲ್ ಕುಮಾರ್, ಇತರರು ಕೋಟೆ ನವೀಕರಣ ಕಾಮಗಾರಿ ಕುರಿತು ಹಲವು ಮಾಹಿತಿ ನೀಡಿದರು.
ಸ್ಥಳ ಪರಿಶೀಲನೆ: ನಗರದ ಕೋಟೆ ಆವರಣದಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ಕೆ. ರಾಮರಾಜನ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಕೋಟೆಯಲ್ಲಿ ಯಾವ ಭಾಗದಲ್ಲಿ ವೇದಿಕೆ ನಿರ್ಮಾಣ, ಧ್ವಜಾರೋಹಣ, ಪೊಲೀಸ್ ಮತ್ತಿತರ ಕಾಮಗಾರಿ ನಡೆಯುತ್ತಿದೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಗರಸಭೆ ವತಿಯಿಂದ ಸ್ವಾತಂತ್ರ್ಯೋತ್ಸವದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆದಿದ್ದು, ಹಲವು ಸಿದ್ಧತೆಗಳು ಭರದಿಂದ ಸಾಗಿವೆ. ಡಿವೈಎಸ್ಪಿ ಜಗದೀಶ್, ಸಿಪಿಐ ಅನೂಪ್ ಮಾದಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವೈ. ಎಸ್.ಸಿದ್ದೇಗೌಡ, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಗಿರೀಶ್, ಸಹಾಯಕ ಎಂಜಿನಿಯರ್ ಸತೀಶ್, ಪೊಲೀಸ್ ಇಲಾಖೆ ಆರ್ ಎಸ್ ಐ ರಾಕೇಶ್, ಪಿಎಸ್ ಐ ಶ್ರೀನಿವಾಸ್ ಇತರರು ಇದ್ದರು.
