ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಮತ ಎಣಿಕೆ ಕಾರ್ಯ ನಿಮಿತ್ತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ೧೯೭೩ರ ಕಲಂ ೧೪೪ ರಲ್ಲಿನ ಪ್ರದತ್ತವಾದ ಅಧಿಕಾರದ ಮೇರೆಗೆ ರಾಮನಗರ ಜಿಲ್ಲೆಯಾದ್ಯಂತ ಜೂನ್ ೪ರ ಬೆಳಿಗ್ಗೆ ೧೨ ಗಂಟೆಯಿಂದ ಜೂನ್ ೫ರ ಬೆಳಿಗ್ಗೆ ೬ ಗಂಟೆಯವರೆಗೆ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ನಿಷೇದಾಜ್ಞೆ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ೫ಕ್ಕಿಂತ ಹೆಚ್ಚು ಜನರ ಗುಂಪು ಕೂಡಿ ಓಡಾಡುವುದನ್ನು ನಿಷೇಧಿಸಿದೆ. ಈ ನಿಷೇದಾಜ್ಞೆ ಇರುವ ಕಾರಣ ಪಟಾಕಿ, ಸಿಡಿಮದ್ದು ಹಾಗೂ ಇತರೆ ಸ್ಪೋಟಕಗಳನ್ನು ಉಪಯೋಗಿಸುವಂತಿಲ್ಲ. ಈ ಅವಧಿಯಲ್ಲಿ ಜೀವಕ್ಕೆ ಹಾನಿಯನ್ನುಂಟು ಮಾಡುವ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿದೆ. ಕ್ಷಾರಪದಾರ್ಥ ಇಲ್ಲವೆ ಸ್ಪೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಜೊತೆಗಿಟ್ಟುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ಯಾವುದೇ ಸಭೆ ಸಮಾರಂಭ ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಿದೆ. ಈ ಆದೇಶವು ಶವ ಸಂಸ್ಕಾರ, ಮದುವೆ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.