ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ ೭೦ರ ಚನ್ನರಾಯಪಟ್ಟಣ ಮೈಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಸಮುಚ್ಚಯವನ್ನು ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರಿ ಆಸ್ತಿಯ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಡೆಸುತ್ತಿದ್ದ ಧರಣಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್ ಭೇಟಿ ನೀಡಿ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು ಕೆ.ಆರ್.ಪೇಟೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿಬಂಧಕ ಪರಶಿವ ನಾಯಕ್ ಅವರು ಸರ್ಕಾರಿ ಆಸ್ತಿಯ ಅಳತೆ ಮಾಡಿ ಜಾಗ ಗುರುತಿಸುವಲ್ಲಿ ವಿಫಲರಾಗಿದ್ದು ಅಕ್ರಮ ಆಸ್ತಿ ಒತ್ತುವರಿಯನ್ನು ತಡೆಯಲು ನಿರ್ಲಕ್ಷತೆ ವಹಿಸಿದ್ದಾರೆ ಎಂದು ಆರೋಪಿಸಿ ಕೆ.ಆರ್.ಪೇಟೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಹಾಗೂ ಜಿಲ್ಲಾ ಉಪಾಧ್ಯಕ್ಷ ಸಿ,ಬಿ ಚೇತನ್ ಕುಮಾರ್ ದೂರುಗಳ ಸುರಿಮಳೆಯನ್ನೇ ಸುರಿಸಿದರು.ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡಲು ವಿಫಲರಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಕೂಡಲೇ ಅಳತೆ ಕಾರ್ಯವನ್ನು ಸಂಪೂರ್ಣಗೊಳಿಸಿ ಸರ್ಕಾರಿ ಆಸ್ತಿಯ ಸಂರಕ್ಷಣೆ ಮಾಡಬೇಕು,ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಮುಚ್ಚಯ ಕಾಮಗಾರಿಯನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಹಾಗೂ ಭೂ ದಾಖಲೆಗಳ ಸಹಾಯಕ ನಿಬಂಧಕ ಪರಶಿವನಾಯಕ್ ಅವರಿಗೆ ನಿರ್ದೇಶನ ನೀಡಿದರು.ವಾಣಿಜ್ಯ ಸಮುಚ್ಚಯ ನಿರ್ಮಾಣಕ್ಕೆ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿರುವ ಪರವಾನಗಿಯನ್ನು ತಡೆಹಿಡಿಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ.ಚನ್ನರಾಯಪಟ್ಟಣ ಮೈಸೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು.ಸರ್ವೆ ಕಾರ್ಯವನ್ನು ಕೂಡಲೇ ಮುಗಿಸಿ ಗಡಿಯನ್ನು ಗುರುತಿಸಬೇಕು.ನಾಲ್ಕು ದಿನಗಳ ಒಳಗೆ ಈ ಕಾರ್ಯ ಸಂಪೂರ್ಣಗೊಳ್ಳಬೇಕು.ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ:ಕುಮಾರ್ ತಹಶೀಲ್ದಾರ್ ನಿಸರ್ಗಪ್ರಿಯ ಅವರಿಗೆ ನಿರ್ದೇಶನ ನೀಡಿದರು.ಇದೇ ಸಂದರ್ಭದಲ್ಲಿ ಮಂಡ್ಯ
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಗೆ ಭೂಮಿಯನ್ನು ಪಡೆದುಕೊಂಡಿರುವ ಸಂತ್ರಸ್ತ ರೈತರು ತಮ್ಮ ಭೂಮಿಗೆ ನೀಡಿರುವ ಬೆಲೆಯು ಅತ್ಯಂತ ಕಡಿಮೆಯಾಗಿದೆ,ನಮ್ಮ ಭೂಮಿಗೆ ವೈಜ್ಞಾನಿಕವಾಗಿ ಪ್ರಸ್ತುತ ನಡೆಯುತ್ತಿರುವ ಮಾರುಕಟ್ಟೆ ದರವನ್ನು ಒದಗಿಸಿಕೊಟ್ಟು ಮಾನವೀಯ ನೆಲಕಟ್ಟಿನಲ್ಲಿ ಸಹಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.ಕೆ.ಆರ್.ಪೇಟೆ ತಾಲೂಕು ಕಛೇರಿ ಭ್ರಷ್ಟಾಚಾರದ ಆಗರವಾಗಿದೆ.ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ರೈತರ ರಕ್ತ ಹೀರುತ್ತಿದ್ದಾರೆ.ಕಳೆದ ೧೫-೨೦ ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರು ಬಿಟ್ಟಿರುವ ಭ್ರಷ್ಟ ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡಿ,ಫೋನ್ ಪೇ ಮೂಲಕ ಲಂಚದ ಹಣವನ್ನು ಸ್ವೀಕರಿಸಿರುವ ಅಧಿಕಾರಿಗಳಿಗೆ ಅಮಾನತ್ತು ಶಿಕ್ಷೆ ನೀಡಿ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಆಲೆನಹಳ್ಳಿ ಕಿಶೋರ್ ಹಾಗೂ ಗೌರವಾಧ್ಯಕ್ಷ ಮುರುಗೇಶ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೆ ಆರ್ ಪೇಟೆ ತಾಲ್ಲೂಕು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್,ಪುರಸಭಾ ಸದಸ್ಯೆ ಪಂಕಜ ಪ್ರಕಾಶ್,ಕರವೇ ತಾಲೂಕು ಉಪಾಧ್ಯಕ್ಷ ಶ್ರೀನಿಧಿ ಟೆಂಪೋ ಶ್ರೀನಿವಾಸ್,ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್,ಮನೋಹರ್ ಗೌಡ,ಪರಮೇಶ್ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.