ಕೊಪ್ಪಳ : ಹೆರಿಗೆ ವೇಳೆ ನವಜಾತ ಶಿಶುವಿನ ಕರುಳು ಹೊರಗೆ ಬಂದಿದ್ದ ಕೇಸ್ ಸಂಬಂಧ ವೈದ್ಯರ ಪ್ರಯತ್ನ ಕೊನೆಗೂ ಫಲಪ್ರದವಾಗಿಲ್ಲ. ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿಶುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ ಕರೆತರಲಾಗಿತ್ತು, ಆದರೆ ನಿನ್ನೆ ರಾತ್ರಿ ಮಗು ಪ್ರಾಣ ಬಿಟ್ಟಿದೆ.
ಕುಕನೂರ ತಾಲೂಕಿನ ಗುತ್ತೂರ ನಿವಾಸಿಗಳಾದ ಮಲ್ಲಪ್ಪ, ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ದುರ್ದೈವ ಎಂಬಂತೆ ಹುಟ್ಟುವ ವೇಳೆಯೇ ಮಗುವಿನ ಕರುಳೆಲ್ಲ ಹೊರಗಡೆ ಬಂದಿದ್ದ ಕಾರಣ ತುರ್ತಾಗಿ ಆಪರೇಷನ್ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಕೊಪ್ಪಳದಿಂದ ತಾಯಿ ಮತ್ತು ಮಗುವನ್ನು 5 ಆಂಬ್ಯುಲೆನ್ಸ್ಗಳ ಮೂಲಕ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್ನಲ್ಲಿ ರವಾನಿಸಲಾಗಿತ್ತು.
ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡ ಇರುವ ಬಗ್ಗೆ ವೈದ್ಯರು ತಿಳಿಸಿದ ಕಾರಣ ಹತ್ತು ಗಂಟೆ ಹಿಂದೆ ಜನಿಸಿದ ಮಗುವನ್ನ ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದರು. ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಕೂಡ ಸಾಥ್ ನೀಡಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಿಶುವನ್ನು ಉಳಿಸಲು ಕಿಮ್ಸ್ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದ ಹೊರತಾಗಿಯೂ ಮಗು ಅಸುನೀಗಿದೆ.



