ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟಿರುವ ಘಟನೆ ಬುಧವಾರ(ಅ. 16) ರಾತ್ರಿ ಸಂಭವಿಸಿದೆ.
ತೆಲಂಗಾಣದ ಭೀಮ್ಲಾ ತಾಂಡಾದಲ್ಲಿ ವಾಸವಿದ್ದ ಕುಟುಂಬವೊಂದು ಕಾರ್ಯಕ್ರಮ ನಿಮಿತ್ತ ತೂಪ್ರಾಣಕ್ಕೆ ತೆರಳಿತ್ತು. ಕಾರ್ಯಕ್ರಮ ಮುಗಿಸಿ ಭೀಮ್ಲಾ ತಾಂಡಾಕ್ಕೆ ವಾಪಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದಿದೆ. ಅಪಘಾತದಿಂದ ಗಾಯಗೊಂಡ ಗಾಯಾಳುಗಳು ಕಾರಿನಿಂದ ಹೊರಬರಲಾಗದೆ ಗಂಭೀರ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ .
ವಿಚಾರ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಶಿವಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಎಂ ಸಂತಾಪ:
ಮೇದಕ್ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವುದು ಬೇಸರದ ಸಂಗತಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.