ಹೊಸೂರು : ಮುದ್ರಣ ಮಾದ್ಯಮ ನಡೆಸುವುದು ಕಷ್ಟ ಸಾಧ್ಯವಾಗಿರುವ ಸಂದರ್ಭದಲ್ಲಿ ಸ್ಥಳೀಯ ಮಟ್ಟದ ಸಣ್ಣ ಪತ್ರಿಕೆ ಕಳೆದ ೪೦ ವರ್ಷಗಳಿಂದ ಪ್ರಕಟಗೊಳ್ಳುತ್ತಿರುವುದು ಎಲ್ಲರೂ ಮೆಚ್ಚುವಂತದ್ದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ನಗರದೂತ ಪತ್ರಿಕೆಯ ೪೦ರ ಸಂಭ್ರಮಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲವೂ ಡಿಜಿಟೀಕರಣಗೊಂಡಿರುವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಓದುವವರ ಸಂಖ್ಯೆ ವಿರಳ ಇಂತಹಾ ಪರಿಸ್ಥಿತಿಯಲ್ಲೂ ನಿರಂತರವಾಗಿ ಪತ್ರಿಕೆ ಮುದ್ರಣ ಮಾಡುತ್ತಿರುವುದಕ್ಕೆ ಸಂಪಾದಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುದ್ರಣ ಮಾದ್ಯಮಕ್ಕೆ ಅದರಲ್ಲೂ ಸಣ್ಣ ಪತ್ರಿಕೆಗಳಿಗೆ ಸರ್ಕಾರ ಜಾಹಿರಾತು ನೀಡುವ ಮೂಲಕ ಆರ್ಥಿಕ ಸಹಕಾರ ನೀಡಿ ಪ್ರೋತ್ಸಹಿಸಬೇಕು ಆಗ ಮಾತ್ರ ಮುದ್ರಣ ಮಾದ್ಯಮ ಉಳಿಯಲು ಸಾಧ್ಯ ಈ ಬಗ್ಗೆ ನಾನು ಸದನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದ ಶಾಸಕರು ನಗರದೂತ ಪತ್ರಿಕೆ ಕನಿಷ್ಠ ೫೦ರ ಸಂಭ್ರಮ ಆಚರಣೆ ಮಾಡುವವರೆಗೂ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ಸ್ಥಳೀಯ ಪತ್ರಿಕೆಗಳಿಗೆ ಜಾಹಿರಾತು ನೀಡುವುದನ್ನು ಸರ್ಕಾರ ಸ್ಥಗಿತಗೊಳಿಸಿದ್ದು ಇದರಿಂದ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗಿದ್ದು ಸ್ಥಳೀಯ ಮತ್ತು ಸಣ್ಣ ಪತ್ರಿಕೆಗಳಿಗೂ ಸರ್ಕಾರ ಜಾಹಿರಾತು ನೀಡಿ ಅವುಗಳು ಪ್ರಕಟಗೊಳ್ಳಲು ಸಹಕಾರ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಎಂ.ಸುಬ್ರಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪತ್ರಿಕೆಯ ಸಂಪಾದಕ ಕೆ.ಟಿ.ಮಂಜುನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪುರಸಭೆ ಸದಸ್ಯ ಕೋಳಿಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ತಿಮ್ಮಶೆಟ್ಟಿ, ರಾಮಶೆಟ್ಟಿ, ರಾಜಯ್ಯ, ವ್ಯಾನ್‌ಸುರೇಶ್, ಮಧುಕಿರಣ್, ಯುಗೇಶ್‌ಕುಮಾರ್ ಮತ್ತು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.