ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನ ಕೆಂಪನಕೊಪ್ಪಲು ಗ್ರಾಮದಲ್ಲಿ ಗ್ರಾಮ ದೇವತೆ ಮಾರಮ್ಮ ದೇವರ ಉತ್ಸವ ಮತ್ತು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ತಮ ಮಳೆಯಾಗಿ ರೈತರು ಬೆಳೆ ಬೆಳೆದು ರಾಜ್ಯ ಸುಭಿಕ್ಷದಿಂದ ಇರಲಿ ಎಂಬ ಭಾವನೆಯಿಂದ ಈ ಹಬ್ಬವನ್ನು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಕೆ.ಆರ್.ನಗರ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಾಳೇನಹಳ್ಳಿ, ಕೆಂಪನಕೊಪ್ಪಲು, ಮಾರಿಗುಡಿಕೊಪ್ಪಲು, ಹೊಸಕೊಪ್ಪಲು ಮತ್ತು ಕನಕ ನಗರ ಬಡಾವಣೆಯ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಗ್ರಾಮ ದೇವತೆಗಳಾದ ವೆಂಕಟರಮಣಸ್ವಾಮಿ, ಬಸವೇಶ್ವರಸ್ವಾಮಿ ಮತ್ತು ಮಾರಮ್ಮ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮಗಳಲ್ಲಿ ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ತೆರಳುವ ರಸ್ತೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತಲ್ಲದೆ, ವಿದ್ಯುತ್ ದೀಪಾಲಂಕಾರಗಳಿಂದ ಗ್ರಾಮಗಳು ಕಂಗೊಳಿಸಿದವು. ಸೋಮವಾರ ಬೆಳಗ್ಗೆ ನಾಲ್ಕು ಗ್ರಾಮಗಳಲ್ಲಿರುವ ಮಾರಮ್ಮ ದೇವರ ದೇವಾಲಯಕ್ಕೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಂಬಿಟ್ಟು ಆರತಿಯೊಂದಿಗೆ ತೆರಳಿ ದೇವತೆಗೆ ನೈವೇದ್ಯ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳು ತಮ್ಮ ಮನೆ ಬಾಗಿಲಿಗೆ ಬಂದಾಗ ಹೆಣ್ಣು ಮಕ್ಕಳು ಬಂಧು ಬಾಂಧವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರ ಕುಣಿತ, ಮಂಗಳವಾದ್ಯ, ತಮಟೆ, ನಗಾರಿ ಮತ್ತಿತರ ಕುಣಿತಗಳು ಗ್ರಾಮಸ್ಥರನ್ನು ಆರ್ಕಷಿಸಿದವು. ಹಬ್ಬದ ಅಂಗವಾಗಿ ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿದು ಶೃಂಗರಿಸಲಾಗಿತ್ತು.
ಗ್ರಾಮದ ಯಜಮಾನರಾದ ಕೆ.ಜೆ.ಕುಮಾರ್, ದೇವರಾಜ್, ಅರ್ಚಕರಾದ ಸ್ವಾಮಿಗೌಡ, ಧನುಷ್ ಅವರುಗಳ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ.ಜಗದೀಶ್, ವಕೀಲ ಕೆ.ಎಸ್.ದಿನೇಶ್, ಗ್ರಾಮದ ಮುಖಂಡರಾದ ಪುಟ್ಟೇಗೌಡ, ಬಸವರಾಜು, ಚಂದ್ರಹಾಸ, ಕೆ.ಎಂ.ರಾಜು, ಸುಮಂತ್, ಕೆ.ಸಿ.ವಿಶ್ವನಾಥ್, ಕೆ.ಎಂ.ಗಿರೀಶ್, ವೆಂಕಟರಾಮು(ಪಾಂಡು), ಆಟೋಶಿವರಾಜು, ಮಹದೇವ್, ಕುಮಾರ್, ಕೆ.ಎಂ.ಹರೀಶ್ ಮತ್ತಿತರರು ಹಾಜರಿದ್ದರು.