ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ತಾಳವಾಡಿ ತಾಲೂಕು ದೊಡ್ಡಗಾಜನೂರಿನ ನಿವಾಸಿ, ಮೇರುನಟ ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ (93) ಅವರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಾಗಮ್ಮ ಅವರ ಅಂತ್ಯಕ್ರಿಯೆ ದೊಡ್ಡಗಾಜನೂರಿನ ತೋಟದಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಲಿದೆ.
ನಾಗಮ್ಮ ಅವರಿಗೆ ಐವರು ಪುತ್ರರು, ಮೂವರು ಪುತ್ರಿಯರಿದ್ದಾರೆ. ಚನ್ನೈನಲ್ಲಿದ್ದ ಓರ್ವ ಪುತ್ರ ಕಳೆದ ತಿಂಗಳಷ್ಟೇ ನಿಧನರಾದರೂ, ಆ ವಿಷಯವನ್ನು ಸಹ ಕುಟುಂಬದವರು ನಾಗಮ್ಮ ಅವರಿಗೆ ತಿಳಿಸಿರಲಿಲ್ಲ.
ನಾಗಮ್ಮ ಅವರಿಗೆ ಪುನೀತ್ ರಾಜ್‌ಕುಮಾರ್ ಮೇಲೆ ಅಪಾರ ಪ್ರೀತಿ ಇತ್ತು. “ಅಪ್ಪು ಚನ್ನಾಗಿದಿಯಾ? ನಿನಗೆ 50 ವರ್ಷ ಆಯ್ತಂತೆ, ನನ್ನನ್ನ ಒಂದ್ ಸಾರಿ ಬಂದ್ ನೋಡ್ಕೊಂಡು ಹೋಗೋ” ಎಂದು ಅವರು ಪುನೀತ್ ಜನ್ಮದಿನದಂದು ಮಾತನಾಡಿದ್ದರು. ಆದರೆ ಪುನೀತ್ ನಿಧನಗೊಂಡಿರುವ ವಿಚಾರವನ್ನು ಕುಟುಂಬದವರು ಅವರಿಂದ ಮುಚ್ಚಿಟ್ಟಿದ್ದರು.
ಡಾ.ರಾಜ್‌ಕುಮಾರ್ ಅವರ ಮಕ್ಕಳಿಗೆ ನಾಗಮ್ಮ ಒಬ್ಬ ಮಮತಾಮಯಿ ತಾಯಿ. ರಾಜ್ ದಂಪತಿ ಶೂಟಿಂಗ್‌ನಲ್ಲಿದ್ದಾಗ ಅವರ ಮಕ್ಕಳನ್ನು ಸಾಕಿ ಬೆಳೆಸಿದವಳು ನಾಗಮ್ಮ. ಈ ಕಾರಣದಿಂದಾಗಿ ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರು ಅವರನ್ನು ವಿಶೇಷವಾಗಿ ನೋಡಿಕೊಂಡು ಹೋಗುತ್ತಿದ್ದರು.
ಅಂತಿಮ ವಿಧಿವಿಧಾನದಲ್ಲಿ ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ , ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ.