ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಕಿತ್ತೂರ ಚೆನ್ನಮ್ಮ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ರಾತ್ರಿ ಊಟ ಮಾಡಿದ ನರ್ಸಿಂಗ್ ವಿಭಾಗದ 40 ಮಂದಿ ವಿದ್ಯಾರ್ಥಿಗಳು ಅಸ್ವಸ್ಥತೆ ಅನುಭವಿಸಿದ್ದಾರೆ. ಇದರ ಪರಿಣಾಮವಾಗಿ ಅನಾರೋಗ್ಯದ ಪರಿಣಾಮದಿಂದ 15 ಮಂದಿ ವಿದ್ಯಾರ್ಥಿಗಳನ್ನು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಿಸಲಾಗಿದ್ದಾರೆ. ಉಳಿದ 25 ಮಂದಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.
ಭಾನುವಾರ ರಾತ್ರಿ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಸಂಭವಿಸಿದೆ. ವಸತಿ ನಿಲಯದಲ್ಲಿ ರಾತ್ರಿ ಊಟ ಮಾಡಿದ ನಂತರ ಕೆಲವು ವಿದ್ಯಾರ್ಥಿಗಳು ವಾಂತಿ, ವಾಕರಿಕೆ, ಹೊಟ್ಟೆನೋವು, ತಲೆಸುತ್ತುವಿಕೆ ಸೇರಿದಂತೆ ವಿವಿಧ ರೋಗ ಲಕ್ಷಣಗಳನ್ನು ಅನುಭವಿಸಲಾರಂಭಿಸಿದರು. ಆರಂಭದಲ್ಲಿ ಕೆಲವೇ ವಿದ್ಯಾರ್ಥಿಗಳಿಗೆ ಸಮಸ್ಯೆ ಕಂಡುಬಂದಿದ್ದರೂ, ಕ್ರಮೇಣ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಕ್ಷೀಣಿಸಿದಾಗ, ವಿಶ್ವವಿದ್ಯಾಲಯ ಆಡಳಿತವು ತ್ವರಿತ ಕ್ರಮ ಕೈಗೊಂಡು ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿತು.
ಅಸ್ವಸ್ಥ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ವಾಹನಗಳ ಮೂಲಕ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ತಕ್ಷಣ ಚಿಕಿತ್ಸೆ ನೀಡಿದ್ದಾರೆ. 15 ಮಂದಿ ವಿದ್ಯಾರ್ಥಿಗಳನ್ನು ಸೂಕ್ತ ಚಿಕಿತ್ಸೆ ಮತ್ತು ಗಮನಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರೆ, ಉಳಿದವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿ ವಸತಿ ನಿಲಯಕ್ಕೆ ಮರಳಲು ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷಿತ ಆರೋಗ್ಯದ ಬಗ್ಗೆ ವಿಶ್ವವಿದ್ಯಾಲಯ ಆಡಳಿತವು ಗಂಭೀರತೆ ವಹಿಸಿದೆ.



