ಚಿಂತಾಮಣಿ: ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗ್ರಾಮದ ರೇಷ್ಮೆ ವ್ಯಾಪಾರಿ ಎಂ.ಷಫಿ ಎಂಬುವವರು ೨೦ ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಅವರ ಮಗ ಮತ್ತು ಸೊಸೆ ಸಹ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಗಾಗ ಚಿನ್ನಸಂದ್ರ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಅಕ್ಟೋಬರ್ ೨೦ ರಿಂದ ಮನೆಗೆ ಯಾರು ಬಂದಿರಲಿಲ್ಲ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ. ಬೀರುವಿನಲ್ಲಿಟ್ಟಿದ್ದ ಸುಮಾರು ೭ ಲಕ್ಷ ನಗದು ಹಣ, ೭೦೦-೮೦೦ ಗ್ರಾಂ ಚಿನ್ನದ ಆಭರಣಗಳು, ಅರ್ಧ ಕೆ.ಜಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಮಗ ಸೆಮಿವುಲ್ಲಾ ಹಾಗೂ ಸೊಸೆ ಪಾಜಿಲಾ ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಸೊಸೆ ಪಾಜಿಲಾ ಇತ್ತೀಚೆಗೆ ಮದುವೆಯೊಂದರ ಸಮಾರಂಭದಲ್ಲಿ ಭಾಗವಹಿಸಲು ತನ್ನ ಒಡವೆಗಳನ್ನು ತಂದು ಮನೆಯಲ್ಲಿ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡಿವೈಎಸ್ಪಿ ಮುರಳೀಧರ್, ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಸಹ ಭೇಟಿ ನೀಡಿದ್ದವು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ